ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪರಿಸರ ಮತ್ತು ಅರಣ್ಯ ಉಳಿಸುವುದು ಮಾನವೀಯತೆಯ ಒಂದು ಭಾಗವಾಗಿದ್ದು, ಯುವ ಸಮುದಾಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದು ವನ್ಯಜೀವಿ ಛಾಯಾಗ್ರಾಹಕರು ಹಾಗೂ ಪರಿಸರ ತಜ್ಞ ಕೃಪಾಕರ ಸೇನಾನಿ ಹೇಳಿದರು.

ಇಲ್ಲಿನ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಡಿವಿಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾಡು ನಾಶ ಮತ್ತು ಮನುಷ್ಯ ವಿನಾಶ ಸಂವಾದದಲ್ಲಿ ಮಾತನಾಡಿ, ಕಾಡಿನ ನಾಶದಿಂದ ಇಂದು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಡಿನ ಶೇಕಡವಾರು ಪ್ರಮಾಣ ಇಂದು ಇಳಿಕೆಯಾಗಿದೆ. ಇದರ ಪರಿಣಾಮ ಮನುಷ್ಯನ ಮೇಲೆ ಮಾತ್ರವಾಗದೆ ಸಕಲ ಜೀವ ರಾಶಿಗಳ ಮೇಲೂ ಆಗಿದೆ. ಪ್ರಾಣಿ, ಪಕ್ಷಿಗಳ ಆವಾಸ ಸ್ಥಾನಗಳಿಗೆ ಧಕ್ಕೆಯಾಗಿದೆ. ಇದರಿಂದಾಗಿ ಅವುಗಳ ಸಂತಿ ಕ್ಷೀಣಿಸುತ್ತಿದೆ ಎಂದರು.

ಆಧುನಿಕ ಯೋಜನೆಗಳಿಂದಾಗಿ ನದಿಗಳ ಹರಿವಿನಲ್ಲಿಯೂ ಬದಲಾವಣೆಯಾಗಿದೆ. ಗಣಿಗಾರಿಕೆಯಿಂದಾಗಿ ಭೂಪದರದಲ್ಲಿಯೂ ವ್ಯತ್ಯಾಸವಾಗುತ್ತಿದೆ. ಅದರಿಂದ ಚಿಮ್ಮುವ ಧೂಳಿನಿಂದ ಗುಡ್ಡ, ಬೆಟ್ಟಗಳಲ್ಲಿನ ಸಸ್ಯ ಸಂಕುಲಗಳಿಗೆ ಧಕ್ಕೆಯಾಗುತ್ತಿದೆ. ಪ್ರಕೃತಿಯ ಸ್ವಾಭಾವಿಕತೆಗೆ ಕಂಟಕವಾದರೆ ಇಡೀ ಜೀವ ಸಂಕುಲಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಉಪವಾಸ ನಡೆಸುತ್ತಿರುವ ಸೊನಮ್ ವಾಂಗ್ಚೂಕ್ ಲೆಹ್‌ಲಡಕ್‌ನ ಒಬ್ಬ ವಿದ್ವಾಂಸ ಹಾಗೂ ಪರಿಸರ ಹೋರಾಟಗಾರ. ಹಿಮಾಲಯದಂತಹ ತಪ್ಪಲಿನಲ್ಲಿ ಸರ್ಕಾರ ಗಣಿಗಾರಿಕೆ ನಡೆಸಲು ಮುಂದಾಗಿದ್ದಾಗ ಅದರ ವಿರುದ್ಧ ಪ್ರಬಲವಾದ ಹೋರಾಟ ಮಾಡಿದ್ದರು. ಅಂತಹ ಹೋರಾಟಗಾರನಿಗೆ ಬೆಂಬಲ ನೀಡಬೇಕಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಕೆ.ಬಸಪ್ಪಗೌಡ, ಭಾರತದಲ್ಲಿ ಎಷ್ಟು ಪ್ರಮಾಣದ ಅರಣ್ಯ ಇರಬೇಕಿತ್ತೋ ಅಷ್ಟು ಇಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲಿ ಶೇ.52ರಷ್ಟು ಅರಣ್ಯವಿತ್ತು. 1982ರ ಹೊತ್ತಿಗೆ ಸ್ಯಾಟಲೈಟ್ ಸರ್ವೇ ನಡೆಸಿದಾಗ ಶೇ.17 ರಷ್ಟು ಅರಣ್ಯ ಇರುವುದು ಗೊತ್ತಾಯಿತು. ಆನಂತ ಅದು ಶೇ.9ಕ್ಕೆ ಕುಸಿದಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿತು. ಯಾವುದೇ ಉದ್ದೇಶಕ್ಕೆ ಅರಣ್ಯ ಭೂಮಿ ಬಳಸುವಾಗ ಕೇಂದ್ರ ಸರ್ಕಾರದ ಅನುಮತಿ ಹಾಗೂ ಸುಪ್ರೀಂ ಕೋರ್ಟ್ ಸಲಹೆ ಪಡೆಯುವಂತೆ ಆದೇಶ ನೀಡಿದೆ ಎಂದರು.

ಡಿವಿಎಸ್ ಮಾಜಿ ಅಧ್ಯಕ್ಷ ರುದ್ರಪ್ಪ ಕೊಳಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ದಿನೇಶ್, ಸಹಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ, ಪ್ರಾಂಶುಪಾಲ ಪ್ರೊ.ಎಂ.ವೆಂಕಟೇಶ್, ಡಾ.ಎಸ್.ಕೆ.ಮಂಜುನಾಥ, ಎನ್. ಕುಮಾರಸ್ವಾಮಿ. ಸವಿತಾ ರಾವ್ ಇದ್ದರು. ಕನ್ನಡ ವಿಭಾಗದಿಂದ ಹೊರತರಲಿರುವ ಸಂಚಲನ ಭಿತ್ತಿ ಪತ್ರಿಕೆಯ ಶೀರ್ಷಿಕೆಯನ್ನು ಇದೇ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

--------------

ಪೋಟೋ: 17ಎಸ್‌ಎಂಜಿಕೆಪಿ10

ಶಿವಮೊಗ್ಗದ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಡಿವಿಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾಡು ನಾಶ ಮತ್ತು ಮನುಷ್ಯ ವಿನಾಶ ಸಂವಾದವನ್ನು ವನ್ಯಜೀವಿ ಛಾಯಾಗ್ರಾಹಕರು ಹಾಗೂ ಪರಿಸರ ತಜ್ಞ ಕೃಪಾಕರ ಸೇನಾನಿ ಉದ್ಘಾಟಿಸಿದರು.