ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ ಸಫಾರಿ!

| Published : Jul 01 2024, 01:54 AM IST

ಸಾರಾಂಶ

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ಹೊತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನ ದರ್ಶನ ಕಾರ್ಯಕ್ರಮ ಆಯೋಜಿಸಲು ಅರಣ್ಯ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಮುಂದಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ಹೊತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನ ದರ್ಶನ ಕಾರ್ಯಕ್ರಮ ಆಯೋಜಿಸಲು ಅರಣ್ಯ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಮುಂದಾಗಿದೆ.

ಚಿಣ್ಣರ ವನ ದರ್ಶನ ಶಿಬಿರದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸರ್ಕಾರಿ ಶಾಲೆಯ ಆಯ್ದ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರನ್ನು ಒಳಗೊಂಡಂತೆ ಗರಿಷ್ಠ 50 ಜನರ ತಂಡ ರಚಿಸಿ ಆ ಮೂಲಕ ವನದರ್ಶನ ಮಾಡಿಸುವುದು ಅರಣ್ಯ ಇಲಾಖೆ ಯೋಜನೆ. ಈ ನಿಟ್ಟಿನಲ್ಲಿ ಹುಕ್ಕೇರಿ ಪ್ರಾದೇಶಿಕ ಅರಣ್ಯ ವಲಯವು ಚಿಣ್ಣರ ವನದರ್ಶನಕ್ಕೆ ದಾಂಡೇಲಿಯ ಕುಳಗಿ ಪ್ರಕೃತಿಯ ಶಿಬಿರವನ್ನು ಆಯ್ಕೆ ಮಾಡಿಕೊಂಡಿದೆ.ಹುಕ್ಕೇರಿ ತಾಲೂಕಿನ ಶಿರಗಾಂವದ ಸರ್ಕಾರಿ ಶಾಲೆಯ 50 ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ವನದರ್ಶನ ಮಾಡುವ ಭಾಗ್ಯ ಒಲಿದು ಬಂದಿದೆ. ಈ ಮೂಲಕ ಮುಂದಿನ ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಪ್ರಕೃತಿ ಸೊಬಗು ಸವಿಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಪ್ರಾದೇಶಿಕ ಅರಣ್ಯ ವಲಯವು ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಪೂರ್ವ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದೆ.ವನ್ಯಜೀವಿ ಸಂಕುಲ ಸಂರಕ್ಷಣೆಯಲ್ಲಿ ಮಾಲಿನ್ಯ ಮುಕ್ತ ಪರಿಸರ, ಭವಿಷ್ಯಕ್ಕೆ ಅರಣ್ಯದ ಉಳಿವು ಎಷ್ಟು ಅತ್ಯವಶ್ಯಕ ಎಂಬ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವ ದೃಷ್ಟಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ಅರಿವು ಮೂಡಿಸಲು ಚಿಣ್ಣರ ವನದರ್ಶನ ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಪ್ರವಾಸದ ವೇಳೆ ಚಾರಣ ಧಾಮಗಳಿಗೂ ಉಚಿತ ಪ್ರವೇಶವಿದೆ. ಈ ಪ್ರವಾಸಕ್ಕೆ ತಗಲುವ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಲಿದ್ದು, ಪ್ರತಿ ವಿದ್ಯಾರ್ಥಿಗೆ ಬ್ಯಾಗ್, ಬುಕ್, ಪೆನ್ ಇತರೆ ಸಾಮಗ್ರಿಗಳುಳ್ಳ ಕಿಟ್ ವಿತರಿಸಲಾಗುತ್ತದೆ. ಇದರಲ್ಲಿ ತಮ್ಮ ಪ್ರವಾಸದ ಅನುಭವವನ್ನು ಬರೆಯಲು ಪ್ರೇರಣೆ ನೀಡಲಾಗುತ್ತದೆ.ಏನಿದರ ಉದ್ದೇಶ?:

ವಿದ್ಯಾರ್ಥಿಗಳನ್ನು ಪರಿಸರ ಜಾಗೃತರನ್ನಾಗಿ ಮಾಡಿ ಅರಣ್ಯಗಳ ಕುರಿತು ಅವರ ದೃಷ್ಟಿಕೋನ ಬದಲಾಯಿಸಿ ಅರಣ್ಯಗಳ ಉಳಿವು ಮತ್ತು ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು. ಕಾಲೇಜು ಮೆಟ್ಟಿಲು ಹತ್ತುವ ಮುನ್ನ ಅರಣ್ಯ ಭೇಟಿ, ವನ್ಯಜೀವಿಗಳ ಮಹತ್ವ ಕುರಿತು ತಿಳಿವಳಿಕೆ ಮೂಡಿಸುವುದು. ನೈಸರ್ಗಿಕ ಸಂಪತ್ತಾದ ಅರಣ್ಯ ಸಂರಕ್ಷಿಸುವುದು. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಉಂಟಾಗುವ ಸಮಸ್ಯೆಗಳು, ಸಂಪನ್ಮೂಲಗಳ ಸದ್ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.ಪ್ರವಾಸದ ವಿಶೇಷವೇನು?

ಅರಣ್ಯ ಸಸ್ಯ ಕ್ಷೇತ್ರಗಳಿಗೆ ತೆರಳಿ ವೀಕ್ಷಿಸುವುದು. ಕ್ಯಾಂಪ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ, ಮಹತ್ವದ ಕುರಿತು ವಿಶೇಷ ಉಪನ್ಯಾಸ, ಮಕ್ಕಳಿಗೆ ಕಾಡಿನಲ್ಲಿ ಉಳಿಯುವ ಅನುಭವಕ್ಕೆ ಪ್ರಕೃತಿಯಲ್ಲಿ ವಾಸ್ತವ್ಯ. ಅರಣ್ಯ ನಡಿಗೆ, ಸಫಾರಿ, ಪಕ್ಷಿಗಳ ವೀಕ್ಷಣೆಗೆ ಅವಕಾಶ. ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡುವುದು, ಮಾಹಿತಿ ಸಂಗ್ರಹಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ.

ಮಾಲಿನ್ಯ ಮುಕ್ತ ಪರಿಸರದ ಭವಿಷ್ಯಕ್ಕಾಗಿ ಅರಣ್ಯ ಉಳಿವು ಅತ್ಯವಶ್ಯಕ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಿ ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರ ಸ್ನೇಹಿ ನಾಗರಿಕನ್ನಾಗಿ ಮಾಡಲು ಈ ಚಿಣ್ಣರ ವನ ದರ್ಶನ ಯೋಜನೆ ರೂಪಿಸಲಾಗಿದೆ. ಅರಣ್ಯಗಳು ನಮ್ಮ ಅಸ್ತಿತ್ವ ಮತ್ತು ಜೀವಜಲದ ಮೂಲಗಳೇ ಹೊರತು ಆದಾಯದ ಮೂಲವಲ್ಲ.

- ಪ್ರಸನ್ ಬೆಲ್ಲದ,

ಆರ್‌ಎಫ್‌ಒ.ಅರಣ್ಯ ಸಂಪತ್ತು, ಪ್ರಕೃತಿ ಪರಿಚಯಿಸುವ ಉದ್ದೇಶದಿಂದ ರೂಪಿಸಿರುವ ಈ ಚಿಣ್ಣರ ವನದರ್ಶನ ಪ್ರವಾಸಕ್ಕೆ ಶಿರಗಾಂವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅರಣ್ಯ, ಶಿಕ್ಷಣ ಮತ್ತು ಸಾರಿಗೆ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.

- ಪ್ರಭಾವತಿ ಪಾಟೀಲ,
ಬಿಇಒ