ಅರಣ್ಯ ಸಿಬ್ಬಂದಿ ಅಮಾನವೀಯತೆಯ ಕೃತ್ಯ: ದೌರ್ಜನ್ಯಕ್ಕೆ ಖಂಡನೆ

| Published : Mar 07 2025, 12:52 AM IST

ಸಾರಾಂಶ

ಅರಣ್ಯ ಸಿಬ್ಬಂದಿ ಕಾನೂನು ವ್ಯಾಪ್ತಿಗೆ ಮೀರಿ ದೈಹಿಕ ಹಲ್ಲೆ, ಅವಾಚ್ಯ ಶಬ್ದ, ಮಾನಸಿಕ ಹಿಂಸೆ ನೀಡಿದ್ದಾರೆ.

ಶಿರಸಿ: ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾಪಂ ವ್ಯಾಪ್ತಿಯ ತಾರಖಂಡ ಗ್ರಾಮದ ಅರಣ್ಯವಾಸಿಗಳ ಕುಟುಂಬದವರ ಮೇಲೆ ಅರಣ್ಯ ಸಿಬ್ಬಂದಿಯಿಂದ ನಡೆದ ದೌರ್ಜನ್ಯವನ್ನು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಖಂಡಿಸಿ, ಅರಣ್ಯ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಅರಣ್ಯ ಸಿಬ್ಬಂದಿಯಿಂದ ದೈಹಿಕ ಹಲ್ಲೆಗೆ ಒಳಗಾಗಿ ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾ ವಿನಾಯಕ ಗೌಡ, ಆಕೆಯ ಪತಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವಿನಾಯಕ ಗೌಡ ಅವರ ಆರೋಗ್ಯ ವಿಚಾರಿಸಿದರು.

ಕೆರಿಯಾ ಅಜ್ಜು ಗೌಡ ಎನ್ನುವವರು ಅನಾದಿ ಕಾಲದಿಂದ ಅತಿಕ್ರಮಣ ಸಾಗುವಳಿ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿ ಕಾನೂನು ವ್ಯಾಪ್ತಿಗೆ ಮೀರಿ ದೈಹಿಕ ಹಲ್ಲೆ, ಅವಾಚ್ಯ ಶಬ್ದ, ಮಾನಸಿಕ ಹಿಂಸೆ ನೀಡಿದ್ದಾರೆ. ಗಾಯಾಳು ವಿದ್ಯಾ ಪ್ರಜ್ಞೆ ಹೀನಳಾದಾಗಲೂ ಬಲಪ್ರಯೋಗದಿಂದ ಅರಣ್ಯ ಇಲಾಖೆಯ ವಾಹನದಲ್ಲಿ ಎತ್ತಿ ಹಾಕಿರುವಂತಹ ಗುರುತರ ಕೃತ್ಯ ಮಾಡಿರುವ ಅರಣ್ಯ ಸಿಬ್ಬಂದಿ ವರ್ತನೆ ವಿಷಾದಕರ ಎಂದು ಹೇಳಿದರು.

ಕಾನೂನು ಮೀರಿದ ಅರಣ್ಯ ಸಿಬ್ಬಂದಿ ಅಮಾನವೀಯ ಕೃತ್ಯದ ವಿರುದ್ಧ ತಕ್ಷಣ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಪುನರಾವರ್ತನೆಗೊಳ್ಳದಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.