ಕೆ.ಕೋಡಿಹಳ್ಳಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ, ಗ್ರಾಮಸ್ಥರ ಆತಂಕ

| Published : Jul 25 2024, 01:21 AM IST

ಕೆ.ಕೋಡಿಹಳ್ಳಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ, ಗ್ರಾಮಸ್ಥರ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಆನೆಗಳ ದಾಳಿಯಿಂದ ಮಾದೇವ ಎಂಬುವವರಿಗೆ ಸೇರಿದ ಎರಡು ಎಕರೆ ಕಬ್ಬು ನಾಶವಾಗಿದೆ. ಇದರಿಂದ ಸುಮಾರು 2 ಲಕ್ಷಕ್ಕೂ ಮೀರಿ ಬೆಳೆ ನಾಶವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಂಗಳವಾರ ಸಂಜೆ ಏರ್ ಗನ್ ಮತ್ತು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸುವ ಮೂಲಕ ಆನೆಗಳನ್ನು ಮತ್ತೆ ಚನ್ನಪಟ್ಟಣದ ಕೃಷ್ಣಾಪುರ ಗ್ರಾಮದ ಕಡೆಗೆ ಹಿಮ್ಮೆಟ್ಟಿಸಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆ. ಕೋಡಿಹಳ್ಳಿ ಬಳಿ ಬುಧವಾರ ಮುಂಜಾನೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಕೋಡಿಹಳ್ಳಿಯ ಶಿಂಷಾ ನದಿ ಪಾತ್ರದ ಮೂಲಕ ಕಬ್ಬಿನ ಗದ್ದೆಗೆ ನುಗ್ಗಿರುವ ಎರಡು ಸಲಗಗಳು ಕಬ್ಬಿನ ಬೆಳೆಯನ್ನು ನಾಶಪಡಿಸಿವೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದ ಆನೆ ಕಾರಿಡಾರ್ ನಿಂದ ಆಹಾರ ಅರಸಿ ವಲಸೆ ಬಂದಿರುವ ಸಲಗಗಳು ಮಂಗಳವಾರ ಮುಂಜಾನೆ ಚನ್ನಪಟ್ಟಣ ಮತ್ತು ಮದ್ದೂರು ಗಡಿಭಾಗದ ತೊಪ್ಪನಹಳ್ಳಿ ಸಮೀಪದ ಮಹಾದೇವ ಎಂಬುವರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದವು.

ಆನೆಗಳ ದಾಳಿಯಿಂದ ಮಾದೇವ ಎಂಬುವವರಿಗೆ ಸೇರಿದ ಎರಡು ಎಕರೆ ಕಬ್ಬು ನಾಶವಾಗಿದೆ. ಇದರಿಂದ ಸುಮಾರು 2 ಲಕ್ಷಕ್ಕೂ ಮೀರಿ ಬೆಳೆ ನಾಶವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ಅರಿತ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಂಗಳವಾರ ಸಂಜೆ ಏರ್ ಗನ್ ಮತ್ತು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸುವ ಮೂಲಕ ಆನೆಗಳನ್ನು ಮತ್ತೆ ಚನ್ನಪಟ್ಟಣದ ಕೃಷ್ಣಾಪುರ ಗ್ರಾಮದ ಕಡೆಗೆ ಹಿಮ್ಮೆಟ್ಟಿಸಿದ್ದರು.

ಬುಧವಾರ ಮುಂಜಾನೆ ಕೋಡಿಹಳ್ಳಿ ಬಳಿ ಕಾಣಿಸಿಕೊಂಡ ಎರಡು ಸಲಗಗಳು ಮಾರ್ಗ ಮಧ್ಯೆ ಮತ್ತೆ ಕಬ್ಬಿನ ಗದ್ದೆಗೆ ನುಗ್ಗಿ ಬೆಳೆ ತಿಂದು ನಾಶಪಡಿಸಿವೆ. ಸದ್ಯ ಆನೆಗಳು ಕಬ್ಬಿನ ಗದ್ದೆಯಿಂದ ಹೊರಬಂದು ಕುರುಚಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಆನೆಗಳು ಸುತ್ತಮುತ್ತಲಿನ ಗ್ರಾಮಗಳ ಪ್ರವೇಶ ಮಾಡಿದಂತೆ ತೀವ್ರ ನಿಗಾ ವಹಿಸಿದ್ದಾರೆ.

ಸಂಜೆ ವೇಳೆಗೆ ಮತ್ತೆ ಆನೆಗಳನ್ನು ಕಾಡಿಗಟ್ಟುವ ಕಾರ್ಯ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.