ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು: ಅರಣ್ಯ ಸಚಿವರ ಎದುರೇ ರೈತರ ಆಕ್ರೋಶ

| Published : Nov 03 2025, 02:03 AM IST

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು: ಅರಣ್ಯ ಸಚಿವರ ಎದುರೇ ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯ ಜೀವಿ ಮತ್ತು ಮಾನವ ಸಂಘರ್ಷಕ್ಕೆ ಅಧಿಕಾರಿಗಳು, ಸಚಿವರೇ ಕಾರಣ. ಕಾಡುಗಳ್ಳ ವೀರಪ್ಪನ್‌ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಯಾರೂ ಕಾಡಿಗೆ ಹೋಗುತ್ತಿರಲಿಲ್ಲ. ಇತ್ತ ಪ್ರಾಣಿಗಳೂ ನಾಡಿಗೆ ಬರುತ್ತಿರಲಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರೇ ರೈತರು ಆಕ್ರೋಶ ಹೊರಹಾಕಿದರು.

ಚಾಮರಾಜನಗರ: ವನ್ಯ ಜೀವಿ ಮತ್ತು ಮಾನವ ಸಂಘರ್ಷಕ್ಕೆ ಅಧಿಕಾರಿಗಳು, ಸಚಿವರೇ ಕಾರಣ. ಕಾಡುಗಳ್ಳ ವೀರಪ್ಪನ್‌ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಯಾರೂ ಕಾಡಿಗೆ ಹೋಗುತ್ತಿರಲಿಲ್ಲ. ಇತ್ತ ಪ್ರಾಣಿಗಳೂ ನಾಡಿಗೆ ಬರುತ್ತಿರಲಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಎದುರೇ ರೈತರು ಆಕ್ರೋಶ ಹೊರಹಾಕಿದರು.

ನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿ ಭಾನುವಾರ ನಡೆದ ಮಾನವ-ಪ್ರಾಣಿ ಸಂಘರ್ಷ ತಡೆ ಕುರಿತು ಜಂಟಿ ಸಭೆಯಲ್ಲಿ ಸ್ಥಳೀಯ ರೈತರು ಕಿಡಿಕಾಡಿದರು.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಆಕ್ರಮ ರೆಸಾರ್ಟ್‌ಗಳು ನಡೆಯುತ್ತಿವೆ, ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು, ಅಕ್ರಮ ಗಣಿಗಾರಿಕೆ-ರೆಸಾರ್ಟ್‌ಗಳು ಯಾವುದೂ ನಡೆಯುತ್ತಿರಲಿಲ್ಲ, ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂದು ರೈತರು ಸಭೆ ಅಸಮಾಧಾನ ವ್ಯಕ್ತಪಡಿಸಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಪ್ರಾಣಿಯಿಂದ- ಮನುಷ್ಯರು ಸತ್ತಾಗ ಸಚಿವರು, ಶಾಸಕರು, ಡಿಸಿಎಫ್‌ಗಳ ಮೇಲೆ ಕೇಸು ಹಾಕಬೇಕು. ಇಷ್ಟು ಹುಲಿ ಹಾಗೂ ಮನುಷ್ಯರ ಸಾವಿಗೆ ಅಧಿಕಾರಿಗಳು, ಅರಣ್ಯ ಸಚಿವರೇ ಕಾರಣ ಎಂದರು. ಮೊದಲೇ ಸರಿಯಾದ ಸಭೆ ನಡೆಸಿ ಕ್ರಮ ಕೈಗೊಂಡಿದ್ದರೆ ಯಾವ ಸಾವು ಆಗುತ್ತಿರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ, ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಸ್ಪಷ್ಟ ದೂರು ಕೊಟ್ಟರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟರು. ರೈತ ಮುಖಂಡ ಎ.ಎಂ. ಮಹೇಶ್ ಕುಮಾರ್ ಮಾತನಾಡಿ, ಅರಣ್ಯದಲ್ಲಿ ಸಫಾರಿ ಹೆಚ್ಚಾಗಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಸಫಾರಿ ಬಂದ್ ಮಾಡಿ ಎಂದು ಆಗ್ರಹಿಸಿದರು.

ಇದೇ ವೇಳೆ ಸಭೆಯಲ್ಲಿ ಮಾನವ- ಪ್ರಾಣಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯಿಂದ ೨- ೩ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ವರದಿಯನ್ನಾಧರಿಸಿ ಶಾಶ್ವತ ಪರಿಹಾರ ಕ್ರಮಗಳನ್ನು ವಹಿಸಲಾಗುತ್ತದೆ ಎಂದು ಸಚಿವ ಖಂಡ್ರೆ ತಿಳಿಸಿದರು.