ಸಾರಾಂಶ
ಮೊಹರಂ, ಕೌಡೆಪೀರ ಹಬ್ಬದ ಸಂದರ್ಭದಲ್ಲಿ ಇಲ್ಲದ ನಿಯಮಗಳು ಗಣೇಶ ಹಬ್ಬದಲ್ಲಿ ಏಕೆ? ಕಾನೂನು ಎಲ್ಲರಿಗೂ ಒಂದೇ ಇರಬೇಕು. ಗಣಪತಿ ಹಬ್ಬದಲ್ಲಿ ಜೆಸ್ಕಾಂ, ಪಪಂ, ಗ್ರಾಪಂ, ಡಿಟಿಪಿ ಸೆಂಟರ್‌ಗಳಿಗೆ ಅಲೆದು ಸಾವಿರಾರು ರೂಪಾಯಿ ಖರ್ಚು ಮಾಡಿ ಗಣಪತಿ ಪ್ರತಿಷ್ಠಾಪಿಸಲು ಪರವಾನಗಿ ಪಡೆದು ಪ್ರತಿಷ್ಠಾಪಿಸುವ ಸಂದರ್ಭವನ್ನು ಸರ್ಕಾರಗಳು ಮಾಡಿವೆ.
ಕನಕಗಿರಿ:
ಗಣಪತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲು ತಾಲೂಕು ಆಡಳಿತ ಅಗತ್ಯ ಕ್ರಮಕೈಗೊಂಡಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ, ಈದ್ ಮಿಲಾದ್ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಂತಿಗೆ ಹೆಸರಾಗಿರುವ ಕನಕಗಿರಿ ತಾಲೂಕಿನಲ್ಲಿ ಜಾತಿ, ಭೇದ ಮರೆತು ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸಬೇಕು. ಗಣೇಶನ ಮೆರವಣಿಗೆ ಹಾಗೂ ವಿಸರ್ಜನಾ ವೇಳೆಯಲ್ಲಿ ಯಾವುದೇ ಅವಘಡಗಳಿಗೆ ಆಸ್ಪದ ನೀಡದೆ ಭಕ್ತಿಪೂರ್ವಕ ಹಬ್ಬದಾಚರಣೆಗೆ ಮುಂದಾಗಬೇಕು. ಕಾನೂನು ಬಾಹಿರ ಚುಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.ಪಿಐ ಎಂ.ಡಿ. ಫೈಜುಲ್ಲಾ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮತ್ತು ಮುಂಜಾಗ್ರತಾ ಕ್ರಮವಾಗಿ ಗಣೇಶ ಹಬ್ಬದ ಭಾಗವಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ವಿಸರ್ಜನಾ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಬ್ಯಾರಿಕೇಡ್ ಹಾಕಬೇಕು. ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸ್ವಚ್ಛತೆ ಮಾಡಬೇಕು. ರಾತ್ರಿ 11ರೊಳಗೆ ವಿಸರ್ಜನೆ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಮಾತನಾಡಿ, ಮೊಹರಂ, ಕೌಡೆಪೀರ ಹಬ್ಬದ ಸಂದರ್ಭದಲ್ಲಿ ಇಲ್ಲದ ನಿಯಮಗಳು ಗಣೇಶ ಹಬ್ಬದಲ್ಲಿ ಏಕೆ? ಕಾನೂನು ಎಲ್ಲರಿಗೂ ಒಂದೇ ಇರಬೇಕು. ಗಣಪತಿ ಹಬ್ಬದಲ್ಲಿ ಜೆಸ್ಕಾಂ, ಪಪಂ, ಗ್ರಾಪಂ, ಡಿಟಿಪಿ ಸೆಂಟರ್‌ಗಳಿಗೆ ಅಲೆದು ಸಾವಿರಾರು ರೂಪಾಯಿ ಖರ್ಚು ಮಾಡಿ ಗಣಪತಿ ಪ್ರತಿಷ್ಠಾಪಿಸಲು ಪರವಾನಗಿ ಪಡೆದು ಪ್ರತಿಷ್ಠಾಪಿಸುವ ಸಂದರ್ಭವನ್ನು ಸರ್ಕಾರಗಳು ಮಾಡಿವೆ. ಅಧಿಕಾರಿಗಳು ಸರ್ಕಾರದ ಸೂಚನೆಯಂತೆ ಕೆಲಸ ಮಾಡುವ ಬದಲು ಸರಿ, ತಪ್ಪುಗಳ ಕುರಿತು ಯೋಚಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಜಸ್ಕಾಂ ಶಾಖಾಧಿಕಾರಿ ಸಿದ್ದಪ್ಪ, ಉಪವಲಯ ಅರಣ್ಯಾಧಿಕಾರಿ ಎಂ.ಡಿ. ಸುಲೇಮಾನ್, ಅಬಕಾರಿ ನೀರಿಕ್ಷಕ ವಿಠ್ಠಲ, ಪ್ರಮುಖರಾದ ಸಣ್ಣ ಕನಕಪ್ಪ, ರವಿ ಭಜಂತ್ರಿ, ಮಹಾಂತೇಶ ಸಜ್ಜನ್, ಮುಕ್ತುಂಸಾಬ್ ಚಳ್ಳಮರದ, ಹನುಮೇಶ ಡಿಶ್, ಶರಣು ಕನಕಾಪೂರ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.