ರಾಷ್ಟ್ರದ ಕೆಲಸಕ್ಕೆ ಪಕ್ಷಭೇದ ಮರೆತು ಬೆಂಬಲಿಸಿ: ಶಿವಶಣರಪ್ಪ ವಾಲಿ ಕರೆ

| Published : Nov 01 2024, 12:32 AM IST

ಸಾರಾಂಶ

ಸರದಾರ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ವತಿಯಿಂದ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ 150ನೇ ಜಯಂತಿ ಹಾಗೂ 11ನೇ ರಾಷ್ಟ್ರೀಯ ಏಕತಾ ದಿವಸ್‌ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ, ಬೀದರ್‌

ರಾಷ್ಟ್ರದ ಕೆಲಸಕ್ಕೆ ಎಲ್ಲರೂ ಪಕ್ಷ ಭೇದವನ್ನು ಮರೆತು ಎಲ್ಲ ರಾಜಕಾರಣಿಗಳು ಮತ್ತು ಜನತೆ ಕೈಜೋಡಿಸಬೇಕು. ರಾಷ್ಟ್ರದ ಹಿತ ನಮ್ಮೆಲ್ಲರಿಗೂ ಮುಖ್ಯ ಎಂದು ಸರದಾರ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಶಣರಪ್ಪ ವಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸರದಾರ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ವತಿಯಿಂದ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ 150ನೇ ಜಯಂತಿ ಹಾಗೂ 11ನೇ ರಾಷ್ಟ್ರೀಯ ಏಕತಾ ದಿವಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ಕಳೆದ 25 ವರ್ಷಗಳಿಂದ ಪಟೇಲರ ಜಯಂತಿಯನ್ನು ಆಚರಿಸುತ್ತಾ ಬಂದಿದ್ದೇವೆ, ಆದರೆ ಕಳೆದ ವರ್ಷ ಪ್ರತಿಷ್ಠಾನದ ಭೂಮಿಯ ಕುರಿತು ಕೆಲವೊಂದು ಅಡೆತಡೆಗಳು ಉಂಟಾಗಿದ್ದವು ಕೆಲವರ ಕುತಂತ್ರದಿಂದ ಅಂದಿನ ಅಧಿಕಾರಿಗಳು ಪ್ರತಿಷ್ಠಾನದ ನಿವೇಶನ ಕುರಿತಾದ ಆದೇಶವನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿ, ಕಾರ್ಯಕ್ರಮಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ, ಮತ್ತು ಇಂದಿನ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಿ ವರದಿ ಒಪ್ಪಿಸುವಂತೆ ಸೂಚಿಸಿದೆ ಎಂದರು.

ಅಂದು ಪಟೇಲರು 500ಕ್ಕೂ ಅಧಿಕ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ಕಟ್ಟಿದರು. ಅಂದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಂತಹ ಈ ಭಾಗವನ್ನು ನಿಜಾಮ ನಿಂದ ಮುಕ್ತಿಗೊಳಿಸಿ ಈ ಭಾಗಕ್ಕೆ ಸ್ವಾತಂತ್ರ‍್ಯವನ್ನು ಕಲ್ಪಿಸಿ ಕೊಟ್ಟಂತಹ ಧೀಮಂತ ನಾಯಕ. ಅಂಥವರ ಪ್ರತಿಮೆ ನಿರ್ಮಾಣಕ್ಕೆ ತಾವೆಲ್ಲರೂ ಸಹಕರಿಸಬೇಕು ಮುಂದಿನ ವರ್ಷದೊಳಗಾಗಿ ಎಲ್ಲಾ ಕಾನೂನು ತೊಡಕು ನಿವಾರಿಸಿಕೊಂಡು ಪ್ರತಿಮೆ ನಿರ್ಮಾಣ ಮಾಡೋಣ ಎಂದರು.

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಮಾತನಾಡಿ, ಪ್ರಾಧಿಕಾರದ ವತಿಯಿಂದ ಕಾನೂನಾತ್ಮಕವಾಗಿ ಪ್ರತಿಷ್ಠಾನದ ಸ್ಥಳದ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆಸಿ ನ್ಯಾಯಯುತವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೀದರ್‌ ದಕ್ಷಿಣ ಮತಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್‌ ಸದಸ್ಯರಾದ ಚಂದ್ರಶೇಖರ್ ಪಾಟೀಲ್‌, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಎಚ್‌ಕೆಇ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ರಜನೀಶ ವಾಲಿ, ಬಿ.ಜಿ ಶೆಟಕಾರ, ಕರ್ನಲ್ ಶರಣಪ್ಪ ಸಿಕೇನಪೂರ, ಬಸವರಾಜ್ ಧನ್ನೂರ್, ದೀಪಕ ವಾಲಿ, ಸುರೇಶ್ ಚೆನ್ನಶೆಟ್ಟಿ, ವಿಜಯಕುಮಾರ್ ಪಾಟೀಲ್‌ ಗಾದಗಿ, ಸೋಮಶೇಖರ ಪಾಟೀಲ್‌ ಗಾದಗಿ, ಮಲ್ಲಿಕಾರ್ಜುನ ವಾಲಿ, ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಜಲಾದೆ, ವಿವೇಕ ವಾಲಿ, ಸುನಿಲ್ ವಾಲಿ, ಆದೀಶ್‌ ವಾಲಿ, ಅನ್ಶುಲ್‌ ವಾಲಿ ಸೇರಿದಂತೆ ನಗರದ ಪ್ರಮುಖರು ಭಾಗಿಯಾಗಿದ್ದರು.

ಭವ್ಯ ಮೆರವಣಿಗೆ, ಪ್ರತಿಜ್ಞಾವಿಧಿ:

ಸರದಾರ ಪಟೇಲ್‌ ಅ‍ವರ ಭಾವಚಿತ್ರವನ್ನು ತೆರೆದ ಸಾರೋಟಿನಲ್ಲಿ ನಗರದ ವಾಲಿ ನಿಲಯದಿಂದ ಪ್ರತಿಷ್ಠಾನದ ಅಧಿಕೃತ ಸ್ಥಳದವರೆಗೆ ಭವ್ಯ ಮೆರವಣಿಗೆಯೊಂದಿಗೆ ಶಿವನಗರದ ಬರೀದ್‌ಶಾಹಿ ಉದ್ಯಾನವನದ ಎದುರಗಡೆ ಆಯೋಜಿಸಲಾಗಿದ್ದ ಕಾರ್ಯಕ್ರಮ ಸ್ಥಳಕ್ಕೆ ಕರೆತರಲಾಯಿತು. ಮೆರವಣಿಗೆಯುವುದಕ್ಕೂ ವಿವಿಧ ಕಲಾತಂಡಗಳು ಭಾಗಿಯಾಗಿದ್ದು ನೋಡುಗರ ಗಮನ ಸೆಳೆದವು. ಎಲ್ಲರಿಗೂ ರಾಷ್ಟ್ರದ ಏಕತೆಗಾಗಿ ಪ್ರತಿಜ್ಞಾವಿಧಿಯನ್ನ ಭೋದಿಸಲಾಯಿತು.