ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ, ನಮ್ಮಲ್ಲಿ ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಹೊಂದಿದ್ದರೂ ಕೂಡ ನಾವೆಲ್ಲ ಭಾರತೀಯರು ಎಂಬ ಬಹುತ್ವದ ಭಾವನೆಯಿಂದ ಬದುಕುತ್ತಿದ್ದೇವೆ ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೆಶಕ ಜೇಸನ್ ಪಾಯ್ಸ್ ತಿಳಿಸಿದರು.

ಹಾನಗಲ್ಲ:ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ, ನಮ್ಮಲ್ಲಿ ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಹೊಂದಿದ್ದರೂ ಕೂಡ ನಾವೆಲ್ಲ ಭಾರತೀಯರು ಎಂಬ ಬಹುತ್ವದ ಭಾವನೆಯಿಂದ ಬದುಕುತ್ತಿದ್ದೇವೆ ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೆಶಕ ಜೇಸನ್ ಪಾಯ್ಸ್ ತಿಳಿಸಿದರು.ಲೊಯೋಲ ವಿಕಾಸ ಕೇಂದ್ರ ಯುವ ಸಂಗಮ ತಾಲೂಕು ಯುವಜನರ ಒಕ್ಕೂಟ ಮತ್ತು ಭಗತ್‌ಸಿಂಗ್ ಯುವಜನರ ಸಂಘ ಶ್ರಿಂಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶೃಂಗೇರಿ ಗ್ರಾಮದಲ್ಲಿ ಸರ್ವಧರ್ಮ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೃಂಗೇರಿ ಗ್ರಾಮದಲ್ಲಿ ವಿವಿಧ ಧರ್ಮಗಳ ಜನರು ಸಹಬಾಳ್ವೆಯ ಜೀವನ ನಡೆಸುವ ಮೂಲಕ ಇತರ ಹಳ್ಳಿಗೆ ಮಾದರಿ ಆಗಿದ್ದಾರೆ. ಈ ಜೀವನ ಶೈಲಿ ಹೀಗೆ ಮುಂದುವರೆಯಲಿ, ಮುಂದಿನ ಪರಂಪರೆ ಸರ್ವಧರ್ಮ ಸಹಮಿಲನದ ಹಾದಿಯಲ್ಲಿ ಸಾಗಲಿ, ಧರ್ಮಗಳ ನಡುವಿನ ಭಿನ್ನಾಭಿಪ್ರಾಯ ಮರೆತು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ ಶಿಕ್ಷಣ, ಜೀವನೋಪಾಯ, ಉದ್ಯೋಗ ಮತ್ತು ಜನರ ಜೀವನ ಮಟ್ಟ ಉನ್ನತಿ ಹಾದಿಯಲ್ಲಿ ಸಾಗಲಿ ಎಂದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರಿನ ವಿದ್ಯಾರ್ಥಿ ವಿಯೋಲ ಆರ್. ಮಾತನಾಡಿ, ನಮ್ಮ ಭಾತರದ ಮಹಿಮೆ ಎಂದರೆ ಇಲ್ಲಿ ಅನೇಕ ಧರ್ಮಗಳು ಇದ್ದರೂ, ಎಲ್ಲರಲ್ಲೂ ಒಂದೆ ಮಾನವೀಯತೆ ಇದೆ. ಹಿಂದೂ, ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಯಾವ ಧರ್ಮವಾಗಲಿ, ಎಲ್ಲವೂ ನಮಗೆ ಒಳ್ಳೆಯತನವನ್ನು, ಪ್ರೀತಿಯನ್ನು, ಶಾಂತಿಯನ್ನು ಕಲಿಸುತ್ತದೆ. ಹಿಂದೂ ಧರ್ಮ ನಮಗೆ ವಸುದೈವ ಕುಟುಂಬಕಂ ಎಂದರೆ ಸಕಲ ಲೋಕವು ಒಂದೇ ಕುಟುಂಬ ಎಂದು ಹೇಳುತ್ತದೆ. ಇಸ್ಲಾಂ ಧರ್ಮ ಶಾಂತಿಯೆ ಧರ್ಮದ ಹೃದಯ ಎಂದು ಹೇಳುತ್ತದೆ. ಒಬ್ಬರಿಗೂ ನೋವು ಕೊಡಬೇಡಿ ಎಂಬ ಸಂದೇಶ ನೀಡುತ್ತದೆ. ಕ್ರೈಸ್ತ ಧರ್ಮ ನಿನ್ನ ನೆರೆಯವನನ್ನು ನಿನ್ನಂತೆ ಪ್ರೀತಿಸು ಎಂದು ಕಲಿಸುತ್ತದೆ. ಪ್ರೀತಿ, ಕ್ಷಮೆ, ಸಹಾಯ ಈ ಮೌಲ್ಯಗಳನ್ನು ಒತ್ತಿ ಹೇಳುತ್ತದೆ. ಜೈನ ಧರ್ಮ ಅಹಿಂಸಾ ಪರಮೋ ಧರ್ಮಂ ಎಂದು ಜೀವಿಗಳನ್ನೆಲ್ಲ ಗೌರವಿಸಲು ನಮಗೆ ಕಲಿಸುತ್ತದೆ. ಬೌದ್ಧ ಧರ್ಮ ಕರುಣೆ ಮಧ್ಯಮಮಾರ್ಗ ಮೂಲಕ ಶಾಂತಿಯ ಜೀವನದ ದಾರಿ ತೋರಿಸುತ್ತದೆ. ಆದ್ದರಿಂದ ಧರ್ಮ ನಮ್ಮನ್ನು ವಿಭಿಜಿಸುವುದಕ್ಕೆ ಅಲ್ಲ, ದಾರಿ ತೋರಿಸಲು ಬಂದಿದೆ. ಹೃದಯದಲ್ಲಿ ಪ್ರೀತಿ ಇದ್ದರೆ ಎಲ್ಲರೂ ಒಂದೇ ಎಂದರು. ಗ್ರಾಮದ ಹಿರಿಯರಾದ ಶಿವಮೂರ್ತಿ ಸಾವಸಗಿ, ಫಕ್ಕಿರಪ್ಪ ಹಿರೂರು, ಫಕ್ಕೀರಪ್ಪ ಸಾವಸಗಿ, ಶಬ್ಬೀರ್ ಶೇಕ್ ಇದ್ದರು. ಕಾರ್ಯಕ್ರಮದಲ್ಲಿ ಶ್ರೀಂಗೇರಿ ಗ್ರಾಮದ ಯುವಕರು, ಹಿರಿಯರು, ಮುಖಂಡರು, ಮಹಿಳೆಯರು, ಪುರುಷರು ಮತ್ತು ಮಕ್ಕಳು ಹಾಗೂ ಸಂತ ಅಲೋಷಿಯಸ್ ವಿಶ್ವವಿದ್ಯಾಲಯ ಮಂಗಳೂರಿನ ವಿದ್ಯಾರ್ಥಿಗಳು ಹಾಜರಿದ್ದರು. ವಿರೇಶ ಕರಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ದಿಲ್‌ರಾಯ್ ನಿರೂಪಿಸಿದರು. ಫಕ್ಕೀರೇಶ ಗೌಡಳ್ಳಿ ವಂದಿಸಿದರು.