ಕನ್ನಡ ಮರೆತರೆ ಹೆತ್ತತಾಯಿಯನ್ನು ಮರೆತಂತೆ: ಮು.ನಾ.ರಮೇಶ್

| Published : Nov 11 2024, 01:05 AM IST

ಕನ್ನಡ ಮರೆತರೆ ಹೆತ್ತತಾಯಿಯನ್ನು ಮರೆತಂತೆ: ಮು.ನಾ.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರು ಭಾಷೆಯ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಳ್ಳಬೇಕು. ಕನ್ನಡ ಬದುಕಿನ ಭಾಷೆಯಾಗಿದ್ದು, ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು, ವಿದ್ಯಾರ್ಥಿಗಳು ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು. ಕನ್ನಡ ಕವಿಗಳು, ಜನಪದವನ್ನು ಓದಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನೀವು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಕನ್ನಡವನ್ನು ಮರೆಯಬೇಡಿ, ನೀವು ಕನ್ನಡವನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆ ಎಂದು ಸಾಹಿತಿ ಮು.ನಾ. ರಮೇಶ ತಿಳಿಸಿದರು.

ಬೋಗಾದಿಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಆದರೆ ಕನ್ನಡ ನೆಲದಲ್ಲಿ ನಾವು ಕನ್ನಡ ತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಆತಂಕ ಉಂಟಾಗಿದೆ ಎಂದರು.

ಕನ್ನಡಿಗರು ಭಾಷೆಯ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಳ್ಳಬೇಕು. ಕನ್ನಡ ಬದುಕಿನ ಭಾಷೆಯಾಗಿದ್ದು, ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು, ವಿದ್ಯಾರ್ಥಿಗಳು ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು. ಕನ್ನಡ ಕವಿಗಳು, ಜನಪದವನ್ನು ಓದಬೇಕು ಎಂದ ಅವರು, ನಿಮ್ಮ ಬಗ್ಗೆ ತಂದೆ ತಾಯಿಯವರು ಭರವಸೆ ಹಾಗು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ನನಸಾಗಿ ಮಾಡಿ ಜೀವನದಲ್ಲಿ ಗುರಿ ಇಟ್ಟುಕೊಂಡು ಬದುಕನ್ನು ಕಟ್ಟಿಕೊಳ್ಳಿರಿ ಎಂದರು.

ನಿಲಯಪಾಲಕ ಚಿಕ್ಕೀರಯ್ಯ ಮಾತನಾಡಿ, ಕನ್ನಡ ಸಮೃದ್ಧ ಭಾಷೆ. ಆದರೆ ಕನ್ನಡ ನೆಲದಲ್ಲಿ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದು, ಕನ್ನಡ ನೆಲದಲ್ಲಿ ಮಾರ್ವಾಡಿಗಳು, ಗುಜರಾತಿಗಳು, ತುಂಬಿ ಹೋಗಿದ್ದಾರೆ, ಕೋಮುವಾದಿಗಳು ದೇವರು ಧರ್ಮದ ಹೆಸರಿನಲ್ಲಿ ನಮ್ಮನ್ನು ಒಡೆದು ಆಳುತ್ತಿದ್ದಾರೆ, ಕನ್ನಡ ನಮ್ಮ ಕಣ- ಕಣದಲ್ಲಿದೆ, ಆದರೆ ಬೇರೆ ಭಾಷೆಗಳನ್ನು ಕಲಿಯಿರಿ, ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬಿಡಬೇಕು ಎಂದರು.

ಸಮಾರಂಭದಲ್ಲಿ ಮೈಸೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ರಮೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಮಹೇಶ್, ನಿಲಯಪಾಲಕ ಗುಂಡ್ಲುಪೇಟೆ ಮಹೇಶ್ ಇದ್ದರು. ಚಿನ್ಮಯ ನಿರೂಪಿಸಿದರು.