ಸಾರಾಂಶ
ರಾಮನಗರ: ಸರಕಾರ ನಗರದ ಅರ್ಚಕರಹಳ್ಳಿ ಬಳಿ ನಿರ್ಮಿಸಲು ಮುಂದಾಗಿರುವ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಲು ಸಮಿತಿ ರಚಿಸಿ ಭೂಮಿ ಕಳೆದುಕೊಂಡ ರೈತರ ನೆರವಿಗೆ ಧಾವಿಸುವಂತೆ ಚನ್ನಪಟ್ಟಣ ಕುಡಿಯುವ ನೀರು, ಕಟ್ಟೆ ವಿರಕ್ತ ಮಠದ ಶಿವರುದ್ರ ಶ್ರೀಗಳು ಆಗ್ರಹಿಸಿದರು.
ನಗರದ ಅರ್ಚಕರಹಳ್ಳಿ ಬಳಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಹಾಗೂ ರಾಜೀವ್ ಗಾಂಧಿ ವಿವಿ ನಿರ್ಮಾಣ ಸಂಬಂಧ ಭೂಮಿ ಕಳೆದು ಕೊಂಡ ರೈತರು ಭಾನುವಾರ ಸಂಜೆ ಆಯೋಜಿಸಿದ್ದ ಸಾಂಕೇತಿಕ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ರೈತರಿಂದ ಯಾವುದೇ ವಿರೋಧವಿಲ್ಲ. ಆದರೆ, ಸರಕಾರ ನ್ಯಾಯ ಸಮ್ಮತ ಪರಿಹಾರ ನೀಡಬೇಕು. ಉದ್ದೇಶಿತ ವಿವಿ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಪ್ರಸ್ತುತ ಮಾರುಕಟ್ಟೆ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಿಕೊಡಬೇಕು ಎಂದು ಹೇಳಿದರು.
ಕನ್ನಮಂಗಲದೊಡ್ಡಿ ರಸ್ತೆಯಿಂದ ರಂಗರಾಯರದೊಡ್ಡಿ ರಸ್ತೆ ತನಕ ಜಮೀನು ಕಳೆದುಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ನಿವೇಶನಗಳನ್ನು ನೀಡಬೇಕು. ಜಮೀನು ಕಳೆದುಕೊಳ್ಳುವ ರೈತ ಕುಟುಂಬದವರಿಗೆ ಉದ್ದೇಶಿತ ರಾಜೀವ್ ಗಾಂಧಿ ವಿವಿ ಆರೋಗ್ಯ ವಿಶ್ವ ವಿದ್ಯಾಲಯದಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.ಭೂ ಸ್ವಾಧೀನ ನಿವೇಶನಗಳ ಹಂಚಿಕೆ ಉದ್ಯೋಗ ಸೌಲಭ್ಯ ಸಂಬಂಧ ರೈತರ ಅಧಿಕಾರಿಗಳ ಜನಪ್ರತಿನಿಧಿಗಳ ಸಮನ್ವಯ ಸಮಿತಿ ರಚಿಸಬೇಕು. ಅರ್ಚಕರಹಳ್ಳಿ ಸರಕಾರಿ ಶಾಲೆಗೆ ಜಾಗದ ಕೊರತೆಯಿದ್ದು, ಶಾಲೆ ಹಾಗೂ ಕ್ರೀಡಾಂಗಣಕ್ಕೆ 5 ಎಕರೆ ಜಾಗವನ್ನು ಮಂಜೂರು ಮಾಡಬೇಕು ಎಂದು ಹೇಳಿದರು.
ಅರ್ಚಕರಹಳ್ಳಿ ವೀರಶೈವ ರುದ್ರಭೂಮಿಗೆ ಜಮೀನು ಕಳೆದ ರೈತ ಕುಟುಂಬಕ್ಕೆ ಬದಲಿ 2 ಎಕರೆ ಜಮೀನು ಮಂಜೂರು, ಶ್ರೀ ಮಲ್ಲೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಮತ್ತು ಸಮುದಾಯದ ಭವನ ನಿರ್ಮಿಸಲು 5 ಎಕರೆ ಜಮೀನು ಮಂಜೂರು, ಗ್ರಾಮದಲ್ಲಿ ಬಸವ ಶ್ರೀ ಗೋ ಶಾಲೆ ಹಾಗೂ ಮಠ ನಿರ್ಮಿಸಲು 5 ಎಕರೆ ಜಾಗ ಮಂಜೂರು ಮಾಡಿಕೊಡಬೇಕೆಂದು ಶ್ರೀಗಳು ಸರಕಾರಕ್ಕೆ ಮನವಿ ಸಲ್ಲಿಸಿದರು.ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾನಂದ ಮಾತನಾಡಿ, ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ವಿವಿ ನಿರ್ಮಾಣಕ್ಕೆ 2006- 07ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಾಡಲಾಗಿತ್ತು. ಆ ವೇಳೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಸರಕಾರ ಪರಿಹಾರ ಒದಗಿಸಿದೆ. ವಿವಿ ನಿರ್ಮಾಣಕ್ಕೆ ಸರಕಾರ 300 ಕೋಟಿ ರು. ಮಂಜೂರು ಮಾಡಿತ್ತು. ಪ್ರಸ್ತುತ ಉದ್ದೇಶಿತ ವಿವಿ ನಿರ್ಮಾಣ ಕಟ್ಟಡ ಕಾಮಗಾರಿ ಮೌಲ್ಯ 1 ಸಾವಿರ ಕೋಟಿ ದಾಟಿದೆ. ಇದೇ ಮಾದರಿಯಲ್ಲಿ ಭೂಮಿ ನೀಡಿದ ರೈತರಿಗೆ ಪ್ರಸ್ತುತ ಬೆಲೆ ನೀಡಬೇಕು ಎಂದು ಹೇಳಿದರು.ಭೂಮಿ ಕಳೆದುಕೊಂಡಿರುವ ಬಹುತೇಕ ರೈತರು ಕಳೆದ 30-40 ವರ್ಷಗಳಿಂದ ತೆಂಗು, ಅಡಿಕೆ ಬೆಳೆದು ಜೀವನ ಸಾಗಿಸುತ್ತಿದ್ದರು. ಪ್ರಕರಣ ನ್ಯಾಯಾಲಯದಲ್ಲಿರಬೇಕಾದರೆ ಅಧಿಕಾರಿಗಳು ಏಕಾಏಕಿ ನುಗ್ಗಿ ಮರಗಳನ್ನು ಕತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಗೆ ಭೂಮಿ ಕಳೆದುಕೊಂಡವರಿಂದ ಯಾವುದೇ ತಕರಾರು ಹಾಗೂ ವಿರೋಧವಿಲ್ಲ. ಆದರೆ, ನ್ಯಾಯುತವಾಗಿ ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಮಠಾಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಉರಗಳ್ಳಿ ಮಠಾಧ್ಯಕ್ಷ ಶಿವಶಂಕರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಪೊಲೀಸ್ ಶಂಕರಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಮುಖಂಡರಾದ ಗುರುಮಾದಯ್ಯ, ವಿಜಯಕುಮಾರ್, ಸೋಮೇಶ್, ಮಹದೇವಯ್ಯ, ರಾಜಶೇಖರ್, ಶಿವಸ್ವಾಮಿ, ಮಲ್ಲೇಶ್, ನಾರಾಯಣ್, ಗೌರಮ್ಮ ಮುಂತಾದವರಿದ್ದರು.