ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಭೂ ಹಗರಣಗಳನ್ನು ಬೇಧಿಸಲು ಎಸ್ಪಿ ಅವರು ಒಂದು ವಾರದೊಳಗಾಗಿ ತಂಡ ರಚನೆ ಮಾಡಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸಬೇಕು. ಒಂದು ವಾರದಲ್ಲಿ ಕೆಲಸ ಆಗದಿದ್ದರೇ ಮತ್ತೊಂದು ಸುತ್ತಿನ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಮಾಫಿಯಾ ವಿರುದ್ಧ ನನ್ನ ಹೋರಾಟ ಈಗಾಗಲೇ ಶುರುವಾಗಿದ್ದು, ಇದರಲ್ಲಿ ಅನ್ಯಾಯವಾಗಿರುವ ಎಲ್ಲರಿಗೂ ನ್ಯಾಯ ಸಿಗುವ ವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಅಮಾಯಕರ, ಬಡವರ ಆಸ್ತಿಗಳನ್ನು ಕೆಲ ದಂಧೆಕೋರರು ವಂಚನೆಯಿಂದ ಬೇರೊಬ್ಬರಿಗೆ ಪರಭಾರೆ ಮಾಡುತ್ತಿದ್ದಾರೆ. ಇದರಲ್ಲಿ ಮೂಲ ದಾಖಲಾತಿಗಳ ಖೊಟ್ಟಿ ಸೃಷ್ಟಿ, ಆಧಾರ್ ಕಾರ್ಡ್ ನಕಲಿ, ಅಧಿಕಾರಿಗಳ ಸಹಿ ನಕಲಿ ಸೇರಿದಂತೆ ಅನೇಕ ಕಾನೂನು ಬಾಹಿರ ಕೃತ್ಯಗಳನ್ನು ಎಸಗಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಮಾಫಿಯಾ, ಭೂ ಹಗರಣಗಳನ್ನು ಕಳೆದ ಮೂರು ತಿಂಗಳಿನಿಂದ ನಾನು ಬೆಳಕಿಗೆ ತಂದಿದ್ದೇನೆ. ಆದರೂ ಅವುಗಳ ಕುರಿತು ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಈ ಕುರಿತು ನಕಲಿ ಭೂ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವುದರನ್ನು ಮಟ್ಟ ಹಾಕುವಂತೆ ಮೊದಲ ಬಾರಿಗೆ ನಾನು ಮೇ.28ರಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಋಷಿಕೇಶ ಸೋನಾವಣೆ ಅವರಿಗೆ ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದ್ದೆ. ಬಳಿಕ ಮೇ.30 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬೆಂಗಳೂರಿನಲ್ಲಿ ಭೇಟಿಯಾಗಿ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ವಿಶೇಷ ತಂಡ ರಚನೆ ಮಾಡಿಸಿ ತನಿಖೆ ಮಾಡಿದಬೇಕು ಅಥವಾ ಈ ಪ್ರಕರಣಗಳನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ಮಾಡಿದ್ದೆ. ಬಳಿಕ ಅದೇ ದಿನ ಸಿಎಂ ಗೃಹಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೂ ಈ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಇದಾಗಿಯೂ ವಂಚನೆಗೊಳಗಾದವರ ಜೊತೆಗೆ ಸೇರಿಯೇ ಜೂನ್ 15ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಈ ವೇಳೆ ವಿಶೇಷ ಅಧಿಕಾರಿ ನೇಮಿಸಿ ತಂಡ ರಚಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರು. ಆದರೂ ಆ ಕೆಲಸ ಆಗಿಲ್ಲ. ಅದಾದ ಬಳಿಕವೂ ಮತ್ತೆ ಹಲವು ಪ್ರಕರಣಗಳು ಆಗಿವೆ, ಹೀಗಾಗಿ ಮತ್ತೆ ಎಸ್ಪಿ ಅವರಿಗೆ ಭೇಟಿಯಾದೆ. ಅಕ್ರಮಗಾರರಿಗೆ ಭಯವಿಲ್ಲದಂತೆ ಹೊರಗಡೆಯೇ ಓಡಾಡುತ್ತಿದ್ದಾರೆ ಎಂದು ದೂರಿದರು.ಇದೇ ವಿಚಾರವನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ 2023ರಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 22 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ ಕೇವಲ 10 ಪ್ರಕರಣಗಳು ದಾಖಲಾಗಿದ್ದು, 13ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾನೂನು ಸಚಿವರು ಮಾಹಿತಿ ಕೊಟ್ಟಿದ್ದಾರೆ. ಆದರೆ, ಇಂತಹ ನೂರಾರು ಪ್ರಕರಣಗಳು ಇದ್ದು, ನೂರಾರು ಕೋಟಿ ಅವ್ಯವಹಾರ ಆಗಿದೆ. ಭೂ ಮಾಫಿಯಾಗೆ ಸಂಭಂದಿಸಿದಂತೆ ಕಳೆದ ಎರಡು ವರ್ಷಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದು, 50ಕ್ಕೂ ಅಧಿಕ ಪ್ರಕರಣಗಳ ದಾಖಲೆಗಳು ನನ್ನ ಬಳಿ ಇವೆ. ಪೊಲೀಸ್ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರ ಜೊತೆಗೆ ಮಹಾನಗರ ಪಾಲಿಕೆಯಲ್ಲೂ ಈ ರೀತಿ ಅವ್ಯವಹಾರ ಶುರುವಾಗಿದೆ. ನಕಲಿ ಸೀಲ್, ನಕಲಿ ಸಹಿ, ನಕಲಿ ಫಾರ್ಂಗಳನ್ನು ರೆಡಿ ಮಾಡಿದ್ದಾರೆ ಎಂಬುವುದು ನನಗೆ ಗೊತ್ತಾಗಿದೆ. ಮೊದಲು ಖೊಟ್ಟಿ ದಾಖಲೆಗಳನ್ನು ತಯಾರು ಮಾಡುವವರನ್ನು, ಮುಖ್ಯ ಕುಳಗಳನ್ನು ಬಂಧಿಸಬೇಕು. ಅದುಬಿಟ್ಟು ಕೇವಲ ಸಣ್ಣಪುಟ್ಟ ಇದ್ದವರನ್ನು ಮಾತ್ರ ಹಿಡಿದಿದ್ದಾರೆ. ನಕಲಿ ದಾಖಲೆ ತಯಾರು ಮಾಡುವವರನ್ನು ಹಿಡಿಯಬೇಕು, ಮೂಲವನ್ನು ಬೇಧಿಸಬೇಕು ಎಂದು ಒತ್ತಾಯಿಸಿದರು.ಈ ಹಿಂದೆ ಇಂಡಿ ತಾಲೂಕಿನ ಹಂಜಗಿ ಗ್ರಾಮ ಪಂಚಾಯತಿಯಲ್ಲಿ ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಿ ಪ್ರಕರಣದಲ್ಲಿ ಇಂಡಿ ಉಪನೋಂದಣಾಧಿಕಾರಿ ಮೇಲೆ ತಕ್ಷಣ ಕ್ರಮ ಆಯಿತು. ಆದರೆ, ನೇರವಾಗಿ ವಿಜಯಪುರ ನೋಂದಣಾಧಿಕಾರಿ ಬಿ.ಎಸ್.ಬಿರಾದಾರ ಮೇಲೆ ಇನ್ನೂ ಕ್ರಮ ಆಗಿಲ್ಲ, ಇದನ್ನು ಯಾರು ತಡೆ ಹಿಡಿದಿದ್ದಾರೆ?. ಯಾರ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ?. ವಂಚನೆಗೊಳಗಾದವರು ಸಬ್ ರಿಜಿಸ್ಟರ್ ಮೇಲೆ ದೂರು ದಾಖಲು ಮಾಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿ ಮೇಲೆ ಆಡಳಿತ ಪಕ್ಷದವರ ಕೃಪಾಕಟಾಕ್ಷ ಇರಬಹುದು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ನಕಲಿ ಆಧಾರ ಕಾರ್ಡ್, ಭೂ ದಾಖಲೆ ಮಾಡಿದವರನ್ನು ಬಂಧಿಸಿಲ್ಲ. ಈ ಭೂ ಮಾಫಿಯಾದಲ್ಲಿ ಗೂಂಡಾಗಳು, ರೌಡಿಶೀಟರ್‌ಗಳು, ಕೊಲೆ ಆರೋಪಿಗಳು ಇದ್ದಾರೆ. ಜಮಿನು ಕಳೆದುಕೊಂಡವರಿಗೆ ಜಮೀನು ಹಾಗೂ ಹಣ ಕಳೆದುಕೊಂಡವರಿಗೆ ಹಣ ಸಿಗಬೇಕು. ಅಲ್ಲಿಯ ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಗುಡುಗಿದರು.ನಗರದ ಬಹುತೇಕ ಕಡೆಗಳಲ್ಲಿ ಗುಂಟಾ ಪ್ಲಾಟ್‌ಗಳು ಇದ್ದು, ಬಡವರು ನಿವೇಶನ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ಸರಿ ಮಾಡಬೇಕು. ಇಂತಹ ಮನೆಗಳಲ್ಲಿ ಈಗಾಗಲೇ ವಾಸಕ್ಕೆ ಇದ್ದವರಿಗೆ ಸಕ್ರಮ ಮಾಡಿದರೇ ಅದರಿಂದ ಮಹಾನಗರ ಪಾಲಿಕೆಗೆ ತೆರಿಗೆ ಸಂದಾಯವಾಗಲಿದ್ದು, ಪಾಲಿಕೆಗೆ ಆದಾಯ ಬರಲಿದೆ. ಇದರ ಬಗ್ಗೆಯೂ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸದನದಲ್ಲಿ ವಿಜಯಪುರ ನಗರ ಶಾಸಕರು ಗಂಭೀರ ಧ್ವನಿ ಎತ್ತಬೇಕಿತ್ತು. ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಈ ಭೂ ಮಾಫಿಯಾದ ಬಗ್ಗೆ ಅವರು ಧ್ವನಿ ಎತ್ತಲಿ.-ಅಪ್ಪಾಸಾಹೇಬ ಪಟ್ಟಣಶೆಟ್ಟಿ,
ಮಾಜಿ ಸಚಿವ.