ಡಿಸಿ ನೇತೃತ್ವದ ತಂಡ ರಚಿಸಿ, ಕಾಮಗಾರಿ ಪರಿಶೀಲಿಸಿ: ಎಚ್.ಕೆ. ಪಾಟೀಲ್

| Published : Jun 20 2024, 01:08 AM IST

ಡಿಸಿ ನೇತೃತ್ವದ ತಂಡ ರಚಿಸಿ, ಕಾಮಗಾರಿ ಪರಿಶೀಲಿಸಿ: ಎಚ್.ಕೆ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಾಮಗಾರಿಯ ಪ್ರತಿ ಹಂತದಲ್ಲೂ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಾಗ ಮಾತ್ರ ಸಮರ್ಪಕ ಕೆಲಸವಾಗುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಗದಗ: ಸರ್ಕಾರದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಅವರು ನಗರದ ನಗರಸಭೆ ಆವರಣದಲ್ಲಿ ಮಂಗಳವಾರ ಸಂಜೆ ಜಿಲ್ಲಾಡಳಿತ ಮತ್ತು ನಗರಸಭೆಯ ಸಹಯೋಗದಲ್ಲಿ ಅಮೃತ ನಗರೋತ್ಥಾನ 4ನೇ ಹಂತದ ₹18.26 ಕೋಟಿಗಳ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನಗರಗಳಿಗೆ ಮೂಲಭೂತ ಸೌಲಭ್ಯದ ಕೊರತೆ ಸಾಕಷ್ಟಿದೆ. ಈ ಅನುದಾನದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ಮೂಲಕ ಮೂಲಭೂತ ಸೌಲಭ್ಯದ ಕೊರತೆ ಕಡಿಮೆಯಾಗಲಿದೆ. ಕಾಮಗಾರಿಗಳಿಗೆ ಸಾಕಷ್ಟು ಹಣ ಹರಿದು ಬರುತ್ತದೆ. ಹಾಗಾಗಿ ಕಾಮಗಾರಿಯ ಅನುಷ್ಠಾನದಲ್ಲಿ ಕೆಲಸದ ಗುಣಮಟ್ಟ ಮಾತ್ರ ಸುಧಾರಿಸಬೇಕು ಎಂದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಾಮಗಾರಿಯ ಪ್ರತಿ ಹಂತದಲ್ಲೂ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಾಗ ಮಾತ್ರ ಸಮರ್ಪಕ ಕೆಲಸವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ನಿಗಾ ವಹಿಸಬೇಕು ಎಂದು ಸೂಚಿಸಿದರು.

ನಗರೋತ್ಥಾನ ಅನುದಾನ ಹೆಚ್ಚಿಗೆ ಬರಲು ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ. ಪಾಟೀಲ ಕಾರಣರಾಗಿದ್ದಾರೆ. ಶಂಕುಸ್ಥಾಪನೆ ಮಾಡಿದ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, 5 ವರ್ಷದ ಅಧಿಕಾರವಧಿಯಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು 59 ತಿಂಗಳು ಅಭಿವೃದ್ಧಿ ಕಡೆಗೆ ಗಮನ ಹರಿಸಿ, ಒಂದು ತಿಂಗಳು ಮಾತ್ರ ರಾಜಕೀಯ ಮಾಡಿದಾಗ ಜನರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಅಧಿಕಾರದ ಚುಕ್ಕಾಣಿ ಹಿಡಿಯುವಾಗಿ ಪಕ್ಷ ಮುಖ್ಯವಾಗುತ್ತದೆ. ಆದರೆ ಸರ್ಕಾರದ ಕಾರ್ಯಗಳು ನಿರಂತರವಾಗಿ ನಡೆಯುವ ವ್ಯವಸ್ಥೆ ಹೊಂದಿರುತ್ತದೆ. ಆಡಳಿತಾತ್ಮಕ ದೋಷಗಳನ್ನು ಸರಿಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಕಾಮಗಾರಿ ಆರಂಭವಾಗಿ, ಮುಕ್ತಾಯ ಆದಾಗ, ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಲು ಸಹಾಯಕವಾಗುತ್ತದೆ ಎಂದರು.

ಗದಗ ರಾಜ್ಯದಲ್ಲಿ ಪ್ರಮುಖ ಹಾಗೂ ಭವಿಷ್ಯದ ನಗರವಾಗಿದೆ. ಅಭಿವೃದ್ಧಿಯಲ್ಲಿ ಯೋಜನಾಬದ್ಧವಾಗಿ ಕಾರ್ಯ ಮಾಡಿದರೆ, ಮಹಾನಗರ ಔದ್ಯೋಗಿಕ ಕೇಂದ್ರವಾಗಿ ಮಾರ್ಪಾಡು ಆಗಲಿದೆ. ಎಲ್ಲ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ‌ ಮೂಲಕ ವಿಕೇಂದ್ರೀಕರಣ ಸಾಧ್ಯ. ಬದಲಾವಣೆಗಳನ್ನು ಜನರು ನಿರೀಕ್ಷೆ‌ ಮಾಡುತ್ತಾರೆ. ಅವರ ಆಶೋತ್ತರಗಳಿಗೆ ತಕ್ಕಂತೆ ಕೆಲಸ‌ ಮಾಡೋಣ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರು ನಗರೋತ್ಥಾನ ಕಾಮಗಾರಿ ಕೈಗೊಳ್ಳಲು ಅನುದಾನ ನೀಡಿದ ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ ಅವರಿಗೆ ಧನ್ಯವಾದ ಸಲ್ಲಿಸಿದರು. ಈ ಅನುದಾನದಿಂದ ತಾವು ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸಹಕಾರಿಯಾಗಿದೆ ಎಂದರು.

ಶಾಸಕರಾದ ಸಿ.ಸಿ‌. ಪಾಟೀಲ, ಡಾ. ಚಂದ್ರು ಲಮಾಣಿ, ಎಸ್.ವಿ. ಸಂಕನೂರು, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್, ನಗರಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಪಂ ಸಿಇಒ ಭರತ್ ಎಸ್., ನಗರಸಭೆ ಪೌರಾಯುಕ್ತ ಪ್ರಶಾಂಶ ವರಗಪ್ಪನವರ, ಮಾರುತಿ ಬ್ಯಾಕೋಡ್ ಇದ್ದರು.