ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು 24 ಗಂಟೆಯೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು

ಕುಷ್ಟಗಿ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವ ಸಂಘ ರಚಿಸಿ, ಪ್ರತಿ ಸಂಘದಲ್ಲಿ 100 ರಿಂದ 250 ಯುವಕರನ್ನು ಸೇರ್ಪಡೆಗೊಳಿಸುವಂತೆ ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಪಿಡಿಒಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಸಮುದಾಯಗಳ 16ರಿಂದ 35ವರ್ಷದೊಳಗಿನ ಯುವಕರನ್ನು ಸಂಘಟನೆಗೆ ಸೇರ್ಪಡೆಗೊಳಿಸಬೇಕು.ಯುವಕರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು 24 ಗಂಟೆಯೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.ಪಿಡಿಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರಿಗೆ ಸಮರ್ಪಕ ನೀರು ಪೂರೈಸಬೇಕು ಎಂದು ಸೂಚಿಸಿದರು.

ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿ ಮೊದಲು ಬೋರ್‌ವೆಲ್ ಪ್ರೆಸ್ಸಿಂಗ್ ಮಾಡಿಸಬೇಕು. ಅಗತ್ಯವಿದ್ದರೆ ಬಾಡಿಗೆ ಬೋರ್‌ವೆಲ್ ಪಡೆದು ನೀರು ಪೂರೈಸಬೇಕು. ಇದರಿಂದಲೂ ಸಮಸ್ಯೆ ಪರಿಹಾರವಾಗದಿದ್ದರೆ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಜನರಿಗೆ ಕುಡಿವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ನೀರಿನ ಕಾಮಗಾರಿ ನಿಯಮಾನುಸಾರ ಕೈಗೊಂಡು ಕಾಮಗಾರಿ ಸ್ಥಳದ ಜಿಪಿಎಸ್ ಆಧಾರಿತ ಫೋಟೊ ಹಾಗೂ ವಿಡಿಯೋ ಕಡ್ಡಾಯವಾಗಿ ದಾಖಲಿಸಬೇಕು. ನೀರು ವ್ಯರ್ಥವಾಗಿ ಹರಿಯದಂತೆ ಕ್ರಮ ಕೈಗೊಂಡು ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಸಮನ್ವಯ ಸಾಧಿಸುವ ಮೂಲಕ ಕುಡಿವ ನೀರು ಸೇರಿದಂತೆ ಮೂಲಸೌಲಭ್ಯ ಜನರಿಗೆ ತಲುಪಿಸಬೇಕು. ನೀರು ಹರಿದು ವ್ಯರ್ಥವಾಗದಂತೆ ಹಾಗೂ ಸೋರಿಕೆ ಕಂಡುಬಂದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.

ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್ಬಿಎ ಆ್ಯಪ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ನಿರಂತರ ಆ್ಯಪ್‌ನಲ್ಲಿ ಶೇ. 82ರಷ್ಟು ಹಾಜರಾತಿ ದಾಖಲಾಗಿದ್ದು, ತಾಂತ್ರಿಕ ದೋಷ ಹಾಗೂ ಫೋಟೊ ಅಪ್‌ಲೋಡ್ ಸಮಸ್ಯೆ ಎದುರಾಗುತ್ತಿವೆ ಎಂದರು.

ತಾಪಂ ಇಒ ಅಮರೇಶ ಮಾತನಾಡಿ, ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ನರೇಗಾ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಟಿಎಚ್‌ಒ ಡಾ.ಆನಂದ ಗೋಟೂರು, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಯೋಗಪ್ಪ, ರಾಜಶೇಖರ್ ಪಾಟೀಲ್, ಗೀತಾ ಅಯ್ಯಪ್ಪನವರ್, ಡಾ.ಆನಂದ ದೇವರನಾವದಗಿ, ಶೋಭಾ, ಅನ್ನಪೂರ್ಣ ಪಾಟೀಲ, ಸುವರ್ಣ, ಸುರೇಶ ಆನೆಬಣ್ಣ, ವಸಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ತಾಪಂ ಸಿಬ್ಬಂದಿ ಇದ್ದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಅರಣ್ಯ ಇಲಾಖೆಗೆ ಎಚ್ಚರಿಕೆ: ಅಕ್ರಮವಾಗಿ ಗಿಡ ಕಡಿದು ಸಾಮಿಲ್ ಹಾಗೂ ಅಡ್ಡೆಗಳಿಗೆ ಸಾಗಿಸುವ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿದ್ಯುತ್ ತಂತಿ ಹಾಗೂ ಕಂಬಗಳ ಕೆಳಗೆ ಗಿಡ ನೆಡದಂತೆ ಕ್ರಮವಹಿಸಬೇಕು ಎಂದು ತಾಪಂ ಇಒ ಅಮರೇಶ ಸೂಚಿಸಿದರು.

ಪಿಡಿಒಗಳಿಗೆ ಸೂಚನೆ: ಎಲ್ಲ ಗ್ರಾಪಂಗಳಲ್ಲಿ ವಿಬಿಜಿ ರಾಮ್‌ಜಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿ ಲಭ್ಯವಿರುವ ಸರ್ಕಾರಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.