ಆಶ್ವೀಜ ಮಾಸದ ಮೊದಲ ಗುರುವಾರ ಸಂಪ್ರದಾಯದಂತೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಗರ್ಭಗುಡಿ ಬಾಗಿಲು ತೆರೆಯುವ ಮುನ್ನ ಗೊನೆಯುಳ್ಳ ಬಾಳೆಕಂಬಕ್ಕೆ ಪಂಜಿನ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯ, ಚಂಡೆಮದ್ದಳೆ, ಕೊಂಬು-ಕಹಳೆಗಳ ನಾದದ ನಡುವೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೈಸೂರು ಅರಸು ವಂಶಸ್ಥ ನಂಜರಾಜ ಅರಸ್ ಅವರು ಕತ್ತಿ ಹಿಡಿದು ಪೂಜೆ ಸಲ್ಲಿಸಿ, ಬಾಳೆಕಂಬಕ್ಕೆ ಒಂಬತ್ತು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಬಾಳೆಕಂಬವನ್ನು ಕತ್ತರಿಸಿದರು. ವರ್ಷವಿಡೀ ಗರ್ಭಗುಡಿಯೊಳಗೆ ನೆಲೆಸಿರುವ ದೇವಿಯ ದೃಷ್ಟಿ ನೇರವಾಗಿ ಬಾಳೆಕಂಬದ ಮೇಲೆ ಬೀಳಬೇಕು ಎಂಬ ನಂಬಿಕೆಯೂ ಈ ಆಚರಣೆ ಹಿಂದಿನ ಅರ್ಥ. ಬಾಳೆಕಂಬ ಛೇದನದ ಬಳಿಕ ಅದರ ಕಂದು ಪಡೆಯಲು ಜನರು ಮುಗಿಬಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ವರ್ಷಕ್ಕೊಮ್ಮೆ ದರ್ಶನ ನೀಡುವ ನಗರದ ಶಕ್ತಿದೇವತೆ ಶ್ರೀ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಗುರುವಾರ ಮಧ್ಯಾಹ್ನ 12.29ಕ್ಕೆ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳೊಂದಿಗೆ ತೆರೆಯಿತು. ಮೈಸೂರು ಅರಸು ವಂಶಸ್ಥ ನಂಜರಾಜ ಅರಸ್ ಅವರು ಗರ್ಭಗುಡಿಯ ಮುಂಭಾಗ ಬಾಳೆಕಂಬವನ್ನು ಕತ್ತಿಯಿಂದ ಕತ್ತರಿಸಿದ ಮರುಕ್ಷಣವೇ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಭಕ್ತಿಯಿಂದ ಕೈಮಗಿದು ದೇವಿಯ ದರ್ಶನ ಪಡೆದು ಪುನೀತರಾದರು.

ಆಶ್ವೀಜ ಮಾಸದ ಮೊದಲ ಗುರುವಾರ ಸಂಪ್ರದಾಯದಂತೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಗರ್ಭಗುಡಿ ಬಾಗಿಲು ತೆರೆಯುವ ಮುನ್ನ ಗೊನೆಯುಳ್ಳ ಬಾಳೆಕಂಬಕ್ಕೆ ಪಂಜಿನ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯ, ಚಂಡೆಮದ್ದಳೆ, ಕೊಂಬು-ಕಹಳೆಗಳ ನಾದದ ನಡುವೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಮೈಸೂರು ಅರಸು ವಂಶಸ್ಥ ನಂಜರಾಜ ಅರಸ್ ಅವರು ಕತ್ತಿ ಹಿಡಿದು ಪೂಜೆ ಸಲ್ಲಿಸಿ, ಬಾಳೆಕಂಬಕ್ಕೆ ಒಂಬತ್ತು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಬಾಳೆಕಂಬವನ್ನು ಕತ್ತರಿಸಿದರು. ವರ್ಷವಿಡೀ ಗರ್ಭಗುಡಿಯೊಳಗೆ ನೆಲೆಸಿರುವ ದೇವಿಯ ದೃಷ್ಟಿ ನೇರವಾಗಿ ಬಾಳೆಕಂಬದ ಮೇಲೆ ಬೀಳಬೇಕು ಎಂಬ ನಂಬಿಕೆಯೂ ಈ ಆಚರಣೆ ಹಿಂದಿನ ಅರ್ಥ. ಬಾಳೆಕಂಬ ಛೇದನದ ಬಳಿಕ ಅದರ ಕಂದು ಪಡೆಯಲು ಜನರು ಮುಗಿಬಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪರಮಪೂಜ್ಯರ ಸಾನ್ನಿಧ್ಯದಲ್ಲಿ ತೆರೆಯಲಾಗಿದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿರುವ ಜಿಲ್ಲಾಡಳಿತ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಉತ್ಸವದ ಪ್ರಚಾರಕ್ಕೆ ಸಹಕರಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಧನ್ಯವಾದ ಸಲ್ಲಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಇಂದಿನ ಕಾಲದಲ್ಲಿಯೂ ಮನುಷ್ಯ ತನ್ನ ಇತಿಮಿತಿಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಪ್ರಕೃತಿಯ ಹಿಂದೆ ಮಹತ್ತರವಾದ ಶಕ್ತಿಯಿದ್ದು, ಸೃಷ್ಟಿ, ಸ್ಥಿತಿ ಮತ್ತು ಲಯದ ತತ್ವವನ್ನು ಅರಿಯುವ ಮೂಲಕ ಜೀವನದ ನಿಜವಾದ ಅರ್ಥವನ್ನು ಕಂಡುಕೊಳ್ಳಬೇಕು ಎಂದರು. ನಗರದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಮೂಲಕ ಆರಂಭವಾದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಕ್ತರು ಕಾತರದಿಂದ ಕಾಯುತ್ತಿದ್ದ ಹಾಸನಾಂಬೆ ದೇವಿಯ ದರ್ಶನದ ಕ್ಷಣ ಬಂದಿದ್ದು, ದೇವಿಯ ದೈವಿಕ ಶಕ್ತಿಯ ಅನುಭೂತಿ ಪಡೆಯುವ ಸುದಿನ ಇದಾಗಿದೆ ಎಂದು ಹೇಳಿದರು. ಸಿದ್ಧಗಂಗಾ ಮಠದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ದಸರಾ ಉತ್ಸವದ ಬಳಿಕ ಕೆಲ ದಿನಗಳಲ್ಲೆ ನಡೆಯುವ ಹಾಸನಾಂಬೆ ಬಾಗಿಲು ತೆರೆದು ದರ್ಶನ ನೀಡುವ ಈ ಜಾತ್ರಾ ಮಹೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಉತ್ತರ ದಿಕ್ಕಿನಿಂದ ಹೊರಟ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ಬಂದು ನೆಲೆಸಿರುವುದೇ ಮಹತ್ವವಾಗಿದೆ ಎಂದರು. ದಿನದ ೨೪ ಗಂಟೆಯು ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಹೇಳಿದರು. ಶಾಸಕ ಎಚ್. ಪಿ. ಸ್ವರೂಪ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ಬಾಗಿಲು ತೆರೆದಿದ್ದು, ಈ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಭಕ್ತರಿಗೆ ಯಾವ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಶ್ರೀ ಶಂಭುನಾಥ ಸ್ವಾಮೀಜಿ ಸೇರಿದಂತೆ ಇತರೆ ಮಠದ ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಮುಜರಾಯಿ ಸಚಿವ ಬಸಂತಪ್ಪ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸ್ವಾಮೀಜಿಗಳನ್ನು ಸಚಿವರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಗೌರವಪೂರ್ವಕವಾಗಿ ಬರಮಾಡಿಕೊಂಡರು. ದೇವಾಲಯದ ಮುಂಭಾಗದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಮುಜರಾಯಿ ಸಚಿವ ಬಸವಂತಪ್ಪ ಮಾತನಾಡಿ, ತಾಯಿ ಹಾಸನಾಂಬೆಯ ದರ್ಶನ ಆರಂಭದ ಈ ಶುಭ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಆಗಮಿಸಿರುವುದು ಸಂತಸ ತಂದಿದೆ. ನಾಡಿನ ಜನತೆಗೆ ಒಳಿತಾಗಲಿ, ರಾಜ್ಯದ ರೈತರಿಗೆ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ದೊರೆಯಲಿ ಎಂದರು. ಹಾಸನಾಂಬೆ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಾಡಿನ ಜನರ ಒಳಿತಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಎಲ್ಲರೂ ಸುಗಮವಾಗಿ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಹಾಸನದ ಕೀರ್ತಿ ಮತ್ತು ಮೆರುಗನ್ನು ಹೆಚ್ಚಿಸುವ ಪ್ರಮುಖ ಧಾರ್ಮಿಕ ಉತ್ಸವವಾಗಿದೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಸುಗಮ ಹಾಗೂ ಸುರಕ್ಷಿತ ದರ್ಶನ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತವು ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಉತ್ಸವದ ಆರಂಭದ ಮೊದಲ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಮೊದಲೇ ತಿಳಿಸಿದ್ದರೂ ಗರ್ಭಗುಡಿ ಬಾಗಿಲು ತೆರೆಯುವ ದಿನವೇ ಅಪಾರ ಸಂಖ್ಯೆಯ ಭಕ್ತರು ದೇವಾಲಯದತ್ತ ಆಗಮಿಸಿದರು. ಜನಸಂದಣಿ ಹೆಚ್ಚಾಗುವ ಸಾಧ್ಯತೆಯನ್ನು ಗಮನಿಸಿದ ಪೊಲೀಸರು ದೇವಾಲಯದ ಮುಖ್ಯ ಪ್ರವೇಶದ್ವಾರವನ್ನು ಮುಚ್ಚಿ, ಒಳಗಿದ್ದವರನ್ನು ಹೊರತುಪಡಿಸಿ ಹೊಸದಾಗಿ ಪ್ರವೇಶಿಸುವವರಿಗೆ ನಿರ್ಬಂಧ ವಿಧಿಸಿದರು. ಹಾಸನಾಂಬೆ ಉತ್ಸವದ ಭದ್ರತೆಗಾಗಿ ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಮೂರು ಪಾಳಿಗಳಲ್ಲಿ ಸುಮಾರು ೨,೦೦೦ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇವಾಲಯದ ಸುತ್ತಮುತ್ತ ಭದ್ರತೆ, ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಅಕ್ಟೋಬರ್ ೨೯ರಂದು ಗರ್ಭಗುಡಿ ಬಾಗಿಲು ತೆರೆಯುವ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಅಕ್ಟೋಬರ್ ೩೦ ರಿಂದ ನವೆಂಬರ್ ೧೦ ರವರೆಗೆ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ ೧೧ ರಂದು ಗರ್ಭಗುಡಿ ಬಾಗಿಲು ಮುಚ್ಚುವ ದಿನವೂ ಸಾರ್ವಜನಿಕ ದರ್ಶನ ಇರುವುದಿಲ್ಲ.