ಬನವಾಸಿ ಕದಂಬೋತ್ಸವಕ್ಕೆ 15 ಸಮಿತಿ ರಚನೆ

| Published : Feb 08 2024, 01:31 AM IST

ಸಾರಾಂಶ

ಕದಂಬ ಜ್ಯೋತಿ ಸಮಿತಿಯ ಜವಾಬ್ದಾರಿ ಬಹಳ ಮುಖ್ಯವಾಗಿದ್ದು, ಫೆ.೨೨ಕ್ಕೆ ಕದಂಬ ಜ್ಯೋತಿ ಗುಡ್ನಾಪುರದಿಂದ ಹೊರಡಲಿದೆ. ಶಿರಸಿ ಮಾರ್ಗವಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ, ಪುನಃ ಬನವಾಸಿಗೆ ಆಗಮಿಸಲಿದೆ.

ಶಿರಸಿ:

ಕದಂಬೋತ್ಸವ ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸಲು ೧೫ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.

ಅವರು ಬುಧವಾರ ನಗರದ ಮಿನಿವಿಧಾನಸೌಧದಲ್ಲಿ ನಡೆದ ಕದಂಬೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರಉ, ಶಿಸ್ತುಬದ್ಧವಾಗಿ ಉತ್ಸವ ನಡೆಯಬೇಕೆಂದು ಸಮಿತಿ ರಚಿಸಲಾಗಿದೆ ಎಂದರು.ಕಾರ್ಯಕಾರಿ ಸಮಿತಿಯು ಮುಖ್ಯ ಸಮಿತಿಯಾಗಿದ್ದು, ಸ್ವಾಗತ ಸಮಿತಿಯಲ್ಲಿ ಸ್ಥಳೀಯ ಶಾಸಕರಾದ ಶಿವರಾಮ ಹೆಬ್ಬಾರ ಮತ್ತು ಭೀಮಣ್ಣ ನಾಯ್ಕ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಗಣ್ಯರನ್ನು ಆಮಂತ್ರಿಸಲಿದ್ದಾರೆ. ಹಣಕಾಸು ಸಮಿತಿಯು ಉತ್ಸವಕ್ಕೆ ಬೇಕಾಗುವ ಹಣಕಾಸು ಸೌಲಭ್ಯ ಒದಗಿಸಲಿದ್ದು, ಈ ಬಾರಿಯ ಕದಂಬೋತ್ಸವಕ್ಕೆ ₹ ೨ ಕೋಟಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕಳೆದ ಬಾರಿಯ ಅನುದಾನ ಸ್ವಲ್ಪ ಉಳಿದಿದೆ. ಅದನ್ನು ಬಳಸಿಕೊಂಡು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕದಂಬೋತ್ಸವದ ಮೂಲಕ ಬನವಾಸಿಯು ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದ್ದು, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದರು.ಸಾಂಸ್ಕೃತಿಕ ಸಮಿತಿಯು ಕಲಾವಿದರನ್ನು ಆಯ್ಕೆ ಮಾಡಲಿದ್ದು, ಮುಖ್ಯ ವೇದಿಕೆ ಮತ್ತು ಉಪ ವೇದಿಕೆ ನಿರ್ಮಿಸಲಾಗುತ್ತಿದೆ. ಮುಖ್ಯ ವೇದಿಕೆಯಲ್ಲಿ ಬಹುಮುಖ್ಯ ಕಲಾವಿದರಿಗೆ ಅವಕಾಶ ನೀಡಲು ತೀರ್ಮಾನಿದ್ದು ಹೊಸ ಕಲಾವಿದರನ್ನು ಆಹ್ವಾನಿಸಲಾಗುತ್ತದೆ. ಉಪ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈಗಾಗಲೇ ಸಾಕಷ್ಟು ಮನವಿ ಬಂದಿದೆ. ಕದಂಬೋತ್ಸವದಲ್ಲಿ ಕಲಾವಿದರಿಗೆ ಕಲೆ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದೆ. ಭಾಗವಹಿಸಲು ಇಚ್ಛಿಸುವ ಕಲಾವಿದರು ತಹಸೀಲ್ದಾರ್‌ಗೆ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಸುಸಜ್ಜಿತ ವೇದಿಕೆ ನಿರ್ಮಾಣದ ಹೊಣೆಯನ್ನು ವೇದಿಕೆ ಸಮಿತಿಯು ನಿರ್ವಹಿಸಲಿದ್ದು, ಈಗಾಗಲೇ ವೇದಿಕೆ ಸಿದ್ಧವಾಗಿದೆ. ಪೆಂಡಾಲ್ ವೇದಿಕೆ ನಿರ್ಮಾಣ ಮತ್ತು ಆಸನಕ್ಕೆ ಟೆಂಡರ್ ಕರೆಯಲಾಗಿದೆ ಎಂದ ಜಿಲ್ಲಾಧಿಕಾರಿ, ವಿವಿಧ ಭಾಗಗಳಿಂದ ಕಲಾವಿದರು, ಗಣ್ಯರು ಆಗಮಿಸಲಿದ್ದು, ಅವರಿಗೆ ಸೂಕ್ತ ವಸತಿ, ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ವಸತಿ ಸಮಿತಿಯದ್ದಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಅಧ್ಯಕ್ಷತೆಯಲ್ಲಿರುವ ಆರೋಗ್ಯ ಸಮಿತಿ ಉತ್ಸವದಲ್ಲಿ ಆಗಮಿಸಿದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಯಾದರೆ ತುರ್ತು ಚಿಕಿತ್ಸೆ, ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಆಹಾರ, ಊಟೋಪಚಾರ ಸಮಿತಿಯು ಉತ್ತಮ ಗುಣಮಟ್ಟದ ತಿಂಡಿ-ಊಟ ನೀಡಬೇಕು. ಶಿರಸಿ ನಗರಸಭೆಯು ಕುಡಿಯುವ ನೀರು ಮತ್ತು ಸ್ವಚ್ಛತೆ ಬಗ್ಗೆ ನೋಡಿಕೊಳ್ಳವ ಜತೆಗೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದರು.ಕದಂಬ ಜ್ಯೋತಿ ಸಮಿತಿಯ ಜವಾಬ್ದಾರಿ ಬಹಳ ಮುಖ್ಯವಾಗಿದ್ದು, ಫೆ.೨೨ಕ್ಕೆ ಕದಂಬ ಜ್ಯೋತಿ ಗುಡ್ನಾಪುರದಿಂದ ಹೊರಡಲಿದೆ. ಶಿರಸಿ ಮಾರ್ಗವಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ, ಪುನಃ ಬನವಾಸಿಗೆ ಆಗಮಿಸಲಿದೆ. ೨ ಜ್ಯೋತಿಯು ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗೆ ತೆರಳಿದೆ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತೆ ಅಪರ್ಣ ರಮೇಶ, ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಡಿಎಸ್‌ಪಿ ಗಣೇಶ.ಕೆ.ಎಲ್, ತಾಪಂ ಆಡಳಿತಾಧಿಕಾರಿ ಬಿ.ಪಿ. ಸತೀಶ, ತಾಪಂ ಇಒ ಸತೀಶ ಹೆಗಡೆ, ಡಿಡಿಪಿಐ ಪಿ. ಬಸವರಾಜ, ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ, ಬನವಾಸಿ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಕಲಾ ಪತ್ತಾರ ಮತ್ತಿತರರ ಅಧಿಕಾರಿಗಳು ಇದ್ದರು.ಕ್ರೀಡೆಗೆ ಹೆಚ್ಚು ಒತ್ತು ನೀಡಿ

ಕದಂಬೋತ್ಸವದ ಪ್ರಯುಕ್ತ ೨ ದಿನ ಮೊದಲು ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಲಾಗುತ್ತದೆ. ಪುರುಷರ ಮ್ಯಾಟ್ ಕಬಡ್ಡಿ, ಹಗ್ಗಜಗ್ಗಾಟ, ಕೇರಂ ಸೇರಿದಂತೆ ಇನ್ನಿತರ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಸ್ ಸೌಲಭ್ಯ ಒದಗಿಸಿಕಳೆದ ಬಾರಿ ಸಾರಿಗೆ ವ್ಯವಸ್ಥೆಯಲ್ಲಿ ಲೋಪವಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿತ್ತು. ಮಹಿಳೆಯರಿಗೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ರಾಜ್ಯ ಸರ್ಕಾರ ಒದಗಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. ಬನವಾಸಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಮತ್ತು ಶಿರಸಿಯಿಂದ ಬನವಾಸಿಗೆ ರಾತ್ರಿ ಸಮಯದಲ್ಲಿಯೂ ಬಸ್ ವ್ಯವಸ್ಥೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.