ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇದ್ದರೆ ಈಗಾಗಲೇ ಇರುವ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿಗೊಳಿಸಲಿ. ಅದನ್ನು ಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಮತ್ತೊಂದು ಸಮಿತಿ ರಚಿಸಿರುವುದು ದೊಡ್ಡ ಮೋಸ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಹಾವೇರಿ: ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇದ್ದರೆ ಈಗಾಗಲೇ ಇರುವ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿಗೊಳಿಸಲಿ. ಅದನ್ನು ಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಮತ್ತೊಂದು ಸಮಿತಿ ರಚಿಸಿರುವುದು ದೊಡ್ಡ ಮೋಸ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಶನಿವಾರ ಕಬ್ಬು ಬೆಳೆಗಾರರ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು ದೇಶವನ್ನು ಎರಡು ಭಾಗ ಮಾಡಿದಂತೆ, ರೈತರು ಹಾಗೂ ಕಾರ್ಖಾನೆಗಳ ವಿಚಾರದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಉತ್ತರ ಭಾರತದ ರೈತರು ಮತ್ತು ಕಾರ್ಖಾನೆಗಳಿಗೆ ಸಿಗುವ ಆದ್ಯತೆ ದಕ್ಷಿಣ ಭಾರತದ ರೈತರು ಹಾಗೂ ಕಾರ್ಖಾನೆಗಳಿಗೆ ಸಿಗುತ್ತಿಲ್ಲ. ನಮ್ಮ ಭಾಗದಲ್ಲಿ ಕೇವಲ ಶೇ.20ರಷ್ಟು ಎಥನಾಲ್ ಖರೀದಿಯಾಗುತ್ತಿದ್ದರೆ, ಉತ್ತರ ಭಾರತದಲ್ಲಿ ಶೇ.80ರಷ್ಟು ಖರೀದಿಸಲಾಗುತ್ತಿದೆ. ಇದರಿಂದ ದಕ್ಷಿಣ ಭಾರತದ ರೈತರಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಎರಡೂ ಸರ್ಕಾರಗಳು ರೈತರಿಗೆ ನ್ಯಾಯ ಒದಗಿಸಬೇಕು. ಕೇವಲ ರಾಜ್ಯ ಸರ್ಕಾರವನ್ನೇ ಗುರಿಯಾಗಿಸುವುದು ಸರಿಯಲ್ಲ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ನಮಗೆ ಅರಿವಿದೆ. ಹಿಂದೆ ಅತಿವೃಷ್ಟಿಯಾದ ಸಂದರ್ಭದಲ್ಲಿಯೂ ಕೇಂದ್ರದ ಒಬ್ಬ ಸಚಿವರೂ ರಾಜ್ಯದತ್ತ ಗಮನ ಹರಿಸಿರಲಿಲ್ಲ ಎಂದು ಹೇಳಿದರು.

ರೈತರ ಹೋರಾಟದ ವಿಚಾರದಲ್ಲಿ ರಾಜಕೀಯ ಪಕ್ಷಗಳು ಮಧ್ಯಪ್ರವೇಶ ಮಾಡಬಾರದು. ನ್ಯಾಯ ದೊರಕುವವರೆಗೆ ರೈತರು ಹೋರಾಟ ಹಿಂಪಡೆಯಬಾರದು. ಬೇಡಿಕೆಗಳನ್ನು ಈಡೇರಿಸಿಕೊಂಡೇ ರೈತರು ಮನೆಗೆ ಮರಳಬೇಕು ಎಂದು ಕರೆ ನೀಡಿದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಅಕ್ಕಿಮಠ ಅಗಡಿಯ ಗುರುಲಿಂಗ ಸ್ವಾಮೀಜಿ ಹಾಗೂ ಬೊಮ್ಮನಹಳ್ಳಿಯ ಶಿವಯೋಗಿ ಸ್ವಾಮೀಜಿ ಪಾದಯಾತ್ರೆ ನೇತೃತ್ವ ವಹಿಸಿದ್ದರು.

ಈ ವೇಳೆ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರೆಡ್ಡಿ ಮರಚರಡ್ಡೇರ, ರೈತ ಮುಖಂಡರಾದ ಗೌಡಪ್ಪಗೌಡ ಪಾಟೀಲ, ಮಾಲತೇಶ ಬನ್ನಿಮಟ್ಟಿ, ಜಗದೀಶ ತೋಟಗೇರ, ರಾಜು ಹಾದಿಮನಿ, ವಿ.ಎಚ್. ಭರಮರಡ್ಡೇರ, ರುದ್ರಪ್ಪ ಬಳಿಗಾರ, ದಾನೇಶಪ್ಪ ಕೆಂಗೊಂಡ, ಹನುಮಂತಪ್ಪ ಕಬ್ಬಾರ, ಲಿಂಗನಗಗೌಡ ಹೊಸಗೌಡ್ರ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.

ಹುಕ್ಕೇರಿಮಠದಿಂದ ಪಾದಯಾತ್ರೆಗೆ ಚಾಲನೆ: ಒಂದು ಟನ್ ಕಬ್ಬಿಗೆ 5,500 ರು. ಬೆಲೆ ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ವಿವಿಧ ಸಂಘಟನೆ ವತಿಯಿಂದ ಹಮ್ಮಿಕೊಂಡಿರುವ ಗುತ್ತಲ-ಹುಬ್ಬಳ್ಳಿ ಪಾದಯಾತ್ರೆ ಶನಿವಾರ ನಗರದ ಹುಕ್ಕೇರಿಮಠದಿಂದ ಮುಂದುವರಿಯಿತು.

ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಣಕು ಶವಯಾತ್ರೆ ನಡೆಸುವ ಮೂಲಕ ಹುಕ್ಕೇರಿಮಠದಿಂದ ಆರಂಭವಾದ ಪಾದಯಾತ್ರೆಯು ಎಂ.ಜಿ. ರಸ್ತೆ, ಜೆ.ಪಿ. ಸರ್ಕಲ್, ಹೊಸಮನಿ ಸಿದ್ದಪ್ಪ ವೃತ್ತ, ಪಿ.ಬಿ. ರೋಡ್ ಮೂಲಕ ಹುಬ್ಬಳ್ಳಿಯತ್ತ ಸಾಗಿತು. ಪಾದಯಾತ್ರೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.

ಬಿಸನಹಳ್ಳಿ ಮಠದಲ್ಲಿ ವಿಶ್ರಾಂತಿ: ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ಆರಂಭಗೊಂಡ ರೈತರ ಪಾದಯಾತ್ರೆ ರಾತ್ರಿ ಶಿಗ್ಗಾಂವಿ ತಾಲೂಕಿನ ಬಿಸನಹಳ್ಳಿ ಮಠಕ್ಕೆ ತಲುಪಿ ಅಲ್ಲಿ ವಿಶ್ರಾಂತಿ ಪಡೆದು ಅ. 18ರಂದು ಬೆಳಗ್ಗೆ ಮತ್ತೇ ಆರಂಭವಾಗಲಿದೆ. 18ರಂದು ಶಿಗ್ಗಾಂವಿ ಪಟ್ಟಣದ ಮೂಲಕ ಗಾಯತ್ರಿ ತಪೋಭೂಮಿ ತಲುಪಲಿದೆ. ಅ. 19ರಂದು ಅಲ್ಲಿಂದ ಹುಬ್ಬಳ್ಳಿಗೆ ತಲುಪಲಿದೆ.