ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ 28 ಗ್ರಾಮಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ ಆರು ಜನರನ್ನು ಒಳಗೊಂಡ ತಂಡ ರಚಿಸಲು ನಗರದ ತಾಪಂ ಸಭಾ ಭವನದಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಕೈಗೊಳ್ಳಲಾಯಿತು.

ರಾಣಿಬೆನ್ನೂರು: ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ 28 ಗ್ರಾಮಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ ಆರು ಜನರನ್ನು ಒಳಗೊಂಡ ತಂಡ ರಚಿಸಲು ನಗರದ ತಾಪಂ ಸಭಾ ಭವನದಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಕೈಗೊಳ್ಳಲಾಯಿತು.

ಭಾರತ ಜೋಡೋ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಪಂ ಮಟ್ಟದಲ್ಲಿ 15 ಜನರನ್ನು ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಭೆ ಒಪ್ಪಿಗೆ ಸೂಚಿಸಿತು.

ಸಭೆಯ ಆರಂಭದಲ್ಲಿಯೇ ಗೃಹ ಲಕ್ಷ್ಮಿ ಯೋಜನೆ ಕುರಿತು ಬಹುತೇಕ ಸದಸ್ಯರು ಪ್ರಸ್ತಾಪ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ವೈ.ಟಿ. ಪೂಜಾರ, ಏನುಮರೇಟರ್ ಮೂಲಕ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಗ್ಯಾರಂಟಿ ಸಮಿತಿ ಸದಸ್ಯರುಗಳಿಗೆ ತರಬೇತಿ ನೀಡಲಾಗುತ್ತದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಹೊಸ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂಜಪ್ಪ ಹಲವಾಗಲ ಮಾತನಾಡಿ, ಗ್ಯಾರಂಟಿ ಅನುಷ್ಕಾನ ಸಮಿತಿಯನ್ನು ಇನ್ನಷ್ಟು ಸುಧಾರಣೆ ಸಲುವಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಣಾಮವಾಗಿ ಜನರಿಗೆ ಮುಟ್ಟಿಸಲು ಸಮಿತಿ ಶ್ರಮಿಸಲಿದೆ. ಯೋಜನೆಯ ಫಲ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಚಂದ್ರಪ್ಪ ಬೇಡರ ಮಾತನಾಡಿ, ಐಟಿ, ಜಿಎಸ್‌ಟಿ ಹಿನ್ನೆಲೆ ಅರ್ಹ ಫಲಾನುಭವಿಗಳನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಸರು ಕೈಬಿಡಲಾಗಿದೆ ಎಂದರು.

ನಗರದ ಬಸ್ ನಿಲ್ದಾಣದಲ್ಲಿನ ಮಹಿಳಾ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಿರುವ ಕುರಿತು ಹಿಂದಿನ ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದರೂ ಇಂದಿಗೂ ವ್ಯವಸ್ಥೆಯಲ್ಲಿ ಸುಧಾರಣೆಯಾಗಿಲ್ಲ ಹಾಗೂ ಮೂತ್ರ ವಿಸರ್ಜನೆಗೂ ಹಣ ವಸೂಲಿ ಮಾಡುತ್ತಾರೆ ಎಂದು ಮಹಿಳಾ ಸದಸ್ಯರು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಾರಿಗೆ ಅಧಿಕಾರಿಗಳು, ಶೌಚಾಲಯದ ನಿರ್ವಹಣೆಗೆ ಇತ್ತೀಚಿಗೆ ಹೊಸದಾಗಿ ಗುತ್ತಿಗೆ ನೀಡಲಾಗಿದೆ. ಅವರಿಗೆ ಮಹಿಳಾ ಪ್ರಯಾಣಿಕರಿಂದ ಮೂತ್ರ ವಿಸರ್ಜನೆಗೆ ಹಣ ವಸೂಲಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಬಹುತೇಕ ಸದಸ್ಯರು, ಪಡಿತರ ಅಂಗಡಿಗಳವರು ಜನರ ಜೊತೆ ಸರಿಯಾಗಿ ವರ್ತನೆ ಮಾಡುವುದಿಲ್ಲ ಎಂದು ಆರೋಪ ಮಾಡಿದರು.

ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ ಸಲುವಾಗಿ ಇಲಾಖೆ ವತಿಯಿಂದ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಆದರೆ ಜನರು ಅದಕ್ಕೆ ಅತ್ಯಗತ್ಯವಾಗಿರುವ ಓಟಿಪಿ ಕೊಡುತ್ತಿಲ್ಲ ಎಂದು ಹೆಸ್ಕಾಂ ಅಧಿಕಾರಿ ಪ್ರಸಾದ ಸಭೆಗೆ ಮಾಹಿತಿ ನೀಡಿದರು.

ಸೋಲಾರ್ ಫಲಾನುಭವಿಗಳಿಗೆ ಗೃಹ ಜ್ಯೋತಿ ಸೌಲಭ್ಯ ಸಿಗುವುದಿಲ್ಲ ಎಂದು ಹೆಸ್ಕಾಂ ಅಧಿಕಾರಿ ನೀರಲಗಿ ತಿಳಿಸಿದರು.

ತಾಪಂ ಇಒ ಡಾ. ವೆಂಕಟೇಶ ವೇದಿಕೆಯಲ್ಲಿದ್ದರು.