ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿನಿರೀಕ್ಷೆಗಿಂತ ಮೊದಲೇ ಮಳೆಗಾಲ ಪ್ರಾರಂಭವಾದ ಕಾರಣಕ್ಕೆ ಹಲವಾರು ಇಲಾಖೆಗಳಲ್ಲಿ ಪೂರ್ವ ಸಿದ್ದತೆ ಆಗದೇ ಇರುವುದರಿಂದ ಈ ಬಾರಿ ಎಲ್ಲೆಡೆ ಸಮಸ್ಯೆ ಕಾಣಿಸಿದೆ. ಆದಾಗ್ಯೂ ಗ್ರಾಮ ಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ಸಂಕಷ್ಟಕ್ಕೆ ಸ್ಪಂದಿಸುವ ತಂಡ ರಚಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಬುಧವಾರ ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ಆಯೋಜಿಸಲಾದ ನೆರೆ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.ರಸ್ತೆ ಡಾಂಬರೀಕರಣ, ಕಾಂಕ್ರಿಟ್ ಕಾಮಗಾರಿ ಮಳೆಯಿಂದ ವಿವಿಧೆಡೆ ಅಪೂರ್ಣವಾಗಿದೆ. ಗಾಳಿ ಮಳೆಗೆ ಸಿಲುಕಿ ಮೆಸ್ಕಾಂ ಇಲಾಖೆ ಭಾರೀ ಹಾನಿಗೆ ತುತ್ತಾಗಿದ್ದು, ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ಪುತ್ತೂರು ತಾಲೂಕು ಒಂದರಲ್ಲೇ ಮೆಸ್ಕಾಂ ೨೩೭ ವಿದ್ಯುತ್ ಕಂಬಗಳನ್ನು ಹಾಗೂ ೧೫ ಪರಿವರ್ತಕಗಳನ್ನು ಕಳೆದುಕೊಂಡಿದೆ. ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆ ನಿಗಾ ಇರಿಸಬೇಕು. ಶಾಲಾ ಕಾಲೇಜು ಮತ್ತು ಅಂಗನವಾಡಿ ಕಟ್ಟಡಗಳ ಶಿಥಿಲತೆಯ ಬಗ್ಗೆ ನಿಗಾವಿರಿಸಬೇಕು. ಖಾಸಗಿ ಭೂಮಿಯಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಮಾತುಕತೆಯ ಮಾರ್ಗೋಪಾಯಗಳನ್ನು ಅನುಸರಿಸಬೇಕು ಎಂದರು.ಬಡವರ ಮನೆ ಗಾಳಿ, ಮಳೆಗೆ ಹಾನಿಗೀಡಾದರೆ ಸ್ಥಳ ಪರಿಶೀಲನೆ ನಡೆಸುವ ಕಂದಾಯ ಇಲಾಖಾಧಿಕಾರಿಗಳು ನಷ್ಟವನ್ನು ಕಡಿಮೆ ಅಂದಾಜಿಸುವುದರಿಂದ ಬಡವರಿಗೆ ಅನ್ಯಾಯವೆಸಗಿದಂತಾಗುತ್ತದೆ. ಮನೆಯೊಂದರ ಛಾವಣಿಯ ಕಾಲು ಭಾಗ ಹಾನಿಗೊಂಡರೆ ಅದನ್ನು ಪೂರ್ಣವಾಗಿ ತೆರವು ಮಾಡಿ ಮತ್ತೆ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಕಡಿಮೆ ನಷ್ಟ ಅಂದಾಜಿಸಿದರೆ ಆ ಬಡವ ಸರ್ಕಾರಿ ಸೌಲಭ್ಯದಿಂದ ವಂಚಿತನಾಗುತ್ತಾನೆ. ಬಡವರ ಜೊತೆ ವ್ಯವಹರಿಸುವಾಗ ಮಾನವೀಯತೆಯ ನಡೆ ತೋರಿ ಎಂದು ಶಾಸಕರು ಕಂದಾಯ ಇಲಾಖಾಧಿಕಾರಿಗಳಿಗೆ ವಿನಂತಿಸಿದರು. ಉಪ್ಪಿನಂಗಡಿಯ ಶಾಲಾ ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ನಿರ್ಮಿಸಲಾದ ಬಲು ಎತ್ತರವಾದ ತಡೆಗೋಡೆಯಲ್ಲಿ ಬಿರುಕು ಕಾಣಿಸಿರುವುದನ್ನು ವಿಡಿಯೋ ದೃಶ್ಯಾವಳಿಯಲ್ಲಿ ಕಂಡ ಶಾಸಕರು ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಪ್ರಕರಣ ಗಂಭೀರವಾಗಿ ಪರಿಗಣಿಸಲು ನಿರ್ದೇಶಿಸಿದರು. ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವೇಗಸ್, ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ಪೌರಾಯುಕ್ತ ಮಧು ಎಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ರೈ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ನಾಯಕ್ ಮತ್ತಿತರರಿದ್ದರು.ವಿವಿಧ ಇಲಾಖಾಧಿಕಾರಿಗಳು, ಉಪ್ಪಿನಂಗಡಿ ಹೋಬಳಿ ಮಟ್ಟದ ವಿವಿಧ ಗ್ರಾಮಗಳ ಕಂದಾಯ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.