ಕಲಬುರ್ಗಿ ಟ್ರಸ್ಟ್‌ ರಚನೆ; ಶಿಕ್ಷಣ ಅಕಾಡೆಮಿಗೆ 5 ಕೋಟಿ

| Published : Feb 15 2024, 01:31 AM IST

ಸಾರಾಂಶ

ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಿಂದ ಜಿಲ್ಲೆಗೆ ಹೆಚ್ಚಿನ ನಿರೀಕ್ಷೆಗಳೇನೂ ಈಡೇರಿರಲಿಲ್ಲ. ಇನ್ನು ಘೋಷಣೆಯಾಗಿದ್ದರಲ್ಲೂ ಕೆಲವೊಂದಿಷ್ಟೇ ಸರ್ಕಾರ ಈಡೇರಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹಿರಿಯ ಸಾಹಿತಿ, ವಿಮರ್ಶಕ ದಿ. ಡಾ.ಎಂ.ಎಂ. ಕಲಬುರ್ಗಿ ಹೆಸರಲ್ಲಿ ಟ್ರಸ್ಟ್‌ ರಚನೆ, ಉನ್ನತ ಶಿಕ್ಷಣ ಅಕಾಡೆಮಿಗೆ ₹5 ಕೋಟಿ..!

ಇದಷ್ಟೇ ಕಳೆದ ಸಲ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೀಡಿದ್ದರಲ್ಲಿ ಈಡೇರಿಕೆಯಾಗಿರುವುದು. ಉಳಿದ ಯಾವ ಘೋಷಣೆಗಳು ಈಡೇರಿಲ್ಲ. ಬೇರೆ ಯಾವ ಅಭಿವೃದ್ಧಿ ಕೆಲಸಗಳು ಆಗಿಲ್ಲ.

ಹೀಗಾಗಿ ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್‌ನಿಂದ ಜಿಲ್ಲೆಗೆ ಹೆಚ್ಚಿನ ನಿರೀಕ್ಷೆಗಳೇನೂ ಈಡೇರಿರಲಿಲ್ಲ. ಇನ್ನು ಘೋಷಣೆಯಾಗಿದ್ದರಲ್ಲೂ ಕೆಲವೊಂದಿಷ್ಟೇ ಸರ್ಕಾರ ಈಡೇರಿಸಿದೆ. ಅದು ಕೂಡ ಅಪೂರ್ಣವಾಗಿದೆ. ಹೀಗಾಗಿ, ಕೊಂಚ ಸಿಹಿ ಕೊಂಚ ಕಹಿಯಾದಂತಾಗಿದೆ.

ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಜುಲೈನಲ್ಲಿ ಬಜೆಟ್‌ ಮಂಡಿಸಿದ್ದರು. ಆಗ ಡಾ. ಎಂ.ಎಂ. ಕಲಬುರ್ಗಿ ಹೆಸರಲ್ಲಿ ಟ್ರಸ್ಟ್‌ ರಚಿಸುವುದಾಗಿ ಹೇಳಿತ್ತು. ಅದರಂತೆ ಟ್ರಸ್ಟ್‌ ಕೂಡ ರಚನೆಯಾಗಿದೆ. ಅದಕ್ಕೆ ವೀರಣ್ಣ ರಾಜೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಇನ್ನು ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿರುವ ಉನ್ನತ ಶಿಕ್ಷಣ ಅಕಾಡೆಮಿಗೆ ₹10 ಕೋಟಿ ಕೊಡುವುದಾಗಿ ಭರವಸೆ ನೀಡಿತ್ತು. ಅದರಲ್ಲಿ ₹5 ಕೋಟಿ ಬಿಡುಗಡೆಯಾಗಿದೆಯಂತೆ. ಇನ್ನೈದು ಕೋಟಿ ಬಗ್ಗೆ ಚಕಾರ ಎತ್ತಿಲ್ಲ.

ಈಡೇರದ ಭರವಸೆ

ಇವಲ್ಲದೇ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಹೊಸ ಕೈಗಾರಿಕಾ ವಸಾಹತುಗಳನ್ನು ಮಾಡುವುದಾಗಿ ಭರವಸೆ ನೀಡಿತ್ತು. ರಾಜ್ಯದ ಏಳು ನಗರಗಳನ್ನು ಗುರುತಿಸಿತ್ತು. ಅದರಲ್ಲಿ ಹುಬ್ಬಳ್ಳಿ ಕೂಡ ಒಂದಾಗಿತ್ತು. ಆದರೆ, ಈವರೆಗೂ ಆ ಬಗ್ಗೆ ಎಳ್ಳಷ್ಟು ಕೆಲಸವಾಗಿಲ್ಲ. ಬರೀ ಘೋಷಣೆಯಾಗಿಯೇ ಉಳಿದಿದೆ.

ಹಾಗೆ ನೋಡಿದರೆ ಸಿದ್ದರಾಮಯ್ಯ ಹೊಸ ಕೈಗಾರಿಕಾ ವಸಾಹತು ಘೋಷಿಸಿದ ವೇಳೆ ಕೈಗಾರಿಕೋದ್ಯಮಿಗಳು ಬಹಳಷ್ಟು ಖುಷಿ ಪಟ್ಟಿದ್ದರು. ಯುವಸಮೂಹ ಮತ್ತಷ್ಟು ಕೈಗಾರಿಕೆಗಳು ಬಂದರೆ ಕೆಲಸಕ್ಕೆ ದೂರದ ಊರುಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂಬ ಭಾವನೆ ಹೊಂದಿದ್ದರು. ಆದರೆ, ಈವರೆಗೂ ಕೈಗಾರಿಕಾ ವಸಾಹತು ಪ್ರಾರಂಭವಾಗುವುದು ಒತ್ತಟ್ಟಿಗಿರಲಿ, ಎಫ್‌ಎಂಸಿಜಿ ಕ್ಲಸ್ಟರ್‌ನಂತಹ ಬೃಹತ್‌ ಘಟಕಗಳು ಬರಲು ಸಿದ್ಧವಾಗಿದ್ದರೂ ನಿವೇಶನ ದರ ಹೆಚ್ಚಿಸಿರುವುದು ಕೈಗಾರಿಕೆಗಳು ಹಿನ್ನಡೆಯಾದಂತಾಗಿದೆ.

ಅತ್ಯಾಧುನಿಕ ಪ್ರಯೋಗಾಲವೂ ಇಲ್ಲ

ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ವತಿಯಿಂದ ಏಳು ಜಿಲ್ಲೆಗಳಲ್ಲಿ ಅತ್ಯಾಧುನಿಕ ಲ್ಯಾಬ್‌ ಹಾಗೂ ಸಂಶೋಧನೆ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ನೆರವಾಗುತ್ತಿತ್ತು. ಆದರೆ ಆ ಕೆಲಸವೂ ಆಗಿಲ್ಲ. ಈ ವರೆಗೂ ಈ ವಿಷಯದಲ್ಲೂ ಎಳ್ಳಷ್ಟು ಕೆಲಸಗಳಾಗಿಲ್ಲ. ಮಹದಾಯಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿತ್ತಷ್ಟೇ. ಅದರಿಂದಲೂ ಏನು ಪ್ರಯೋಜನವಾಗಿಲ್ಲ.

ಬಜೆಟ್‌ ಬರೀ ಘೋಷಣೆಯಾಗದೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಈ ವರ್ಷವಾದರೂ ಕಳೆದ ಸಲದ ಬಜೆಟ್‌ನಲ್ಲಿ ಭರವಸೆಗಳನ್ನು ಈಡೇರಿಸಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.