ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಹೆಗ್ಗೆರೆ ಹಿರಿಯ ಪ್ರಾಥಮಿಕ ಪಾಠ ಶಾಲಾ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಶಾಲೆಯಲ್ಲಿ ಮಕ್ಕಳ ಚುನಾವಣೆ. ಇಲ್ಲಿ ಮಕ್ಕಳೇ ಸ್ಪರ್ಧಾಳುಗಳು, ಮಕ್ಕಳು ಸರತಿ ಸಾಲಿನಲ್ಲಿ ನಿಂತು, ತಮ್ಮ ಆಧಾರ್ ಕಾರ್ಡ್ ತೋರಿಸುತ್ತಾ ಬೆರಳಿಗೆ ಶಾಹಿ ಗುರುತು ಹಾಕಿಸಿಕೊಂಡು, ಇವಿಎಂ ಮಾದರಿಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮಗಿಷ್ಟವಾದ ವಿದ್ಯಾರ್ಥಿ ನಾಯಕನಿಗೆ ಮತಚಲಾಯಿಸಿದ ಪರಿ ಭವಿಷ್ಯದ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೂಲಪಾಠವನ್ನು ತಿಳಿಸಿಕೊಡುವ ಕೆಲಸ ಯಾಸ್ವಿಯಾಯಿತು.ನಾಮಪತ್ರ ಸಲ್ಲಿಕೆ, ಉಮೇದುವಾರರ ಪಟ್ಟಿ ಪ್ರಕಟ, ಮಾದರಿ ಇವಿಎಂನಲ್ಲಿ ನೀಲಿ ಬಟನ್ ಒತ್ತುವ ಮೂಲಕ ಮತಚಲಾವಣೆ ಹೀಗೆ ಇಡೀ ಶಾಲಾ ವಾತಾವರಣ ಚುನಾವಣಾ ಪ್ರಕ್ರಿಯೆಯಲ್ಲಿ ಮುಳುಗಿತ್ತು.ಬದಲಾದ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಯೋಗದ ಮೂಲಕ ತಿಳಿಸಿದಾಗ ಸುಲಭವಾಗಿ ಸಮಾಜದ ಪ್ರಚಲಿತ ಘಟನೆಗಳು ಹಾಗೂ ಪಠ್ಯಕ್ಕೆ ಪೂರಕವಾದ ಜ್ಞಾನವನ್ನು ಪಡೆಯವಲ್ಲಿ ಹೆಚ್ಚಿನ ಉತ್ಸಾಹ ಮೂಡಿಸುತ್ತದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಾಲೆಯ ಮುಖ್ಯಶಿಕ್ಷಕಿ ಶೈಲಜ ಎಂಜಿ. ಹೇಳಿದರು.ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.ಶಾಲೆಯ ಒಟ್ಟು 207 ಮತದಾರರಪೈಕಿ 181 ಮತ ಚಲಾವಣೆಯಾದವು. 18 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 25 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಹೆಚ್ಚು ಮತಗಳನ್ನು ಪಡೆದ ಅಜರ್ ಅಲೀ ಖಾನ್ ಮುಖ್ಯಮಂತ್ರಿಯಾಗಿ, ಸೈಯದಾ ಅಫ್ಸಾ ಉಪ ಮುಖ್ಯಮಂತ್ರಿಯಾಗಿ, ಕೃತಿಕಶ್ರೀ ಶಿಕ್ಷಣ ಮಂತ್ರಿಯಾಗಿ ಆಯ್ಕೆಯಾದರು.ಮಾದರಿ ಇವಿಎಂನಲ್ಲಿ ಅಭ್ಯರ್ಥಿಗಳ ಪಟ್ಟಿಯ ಕೊನೆಯಲ್ಲಿ NOTA ಬಟನ್ ಸಹ ನೀಡಲಾಗಿತ್ತು. ಒಂದು ಮತ ನೋಟಾಕ್ಕೂ ಚಲಾವಣೆಯಾಗಿದೆ.ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಸಹ ಶಿಕ್ಷಕರುಗಳಾದ ಪಿ.ಎ. ಲಕ್ಷ್ಮಿ ಪಿಆರ್‌ಓ ಆಗಿ, ಎಪಿಆರ್‌ಓ ಆಗಿ ಶಶಿಕಲಾ ಹೆಚ್.ಡಿ., ಪಿಓಗಳಾಗಿ ದೈಹಿಕ ಶಿಕ್ಷಕಿ ವಾಣಿಶ್ರೀ, ನವೀದಾ ಅಖ್ತರ್, ಸುಧಾ ಸಿಎನ್, ಸೆಕ್ಟರ್ ಆಫೀಸರ್ ಆಗಿ ಮಲ್ಲಿಕಾರ್ಜುನಯ್ಯ ಹೆಚ್.ಆರ್., ಪೊಲೀಸ್ ಅಧಿಕಾರಿಯಾಗಿ ರಾಧಾಮಣಿ ಕಾರ್ಯನಿರ್ವಹಿಸಿದರು. ಶಿಕ್ಷಕಿ ಕೆ.ಕಮಲ ಶಾಲಾ ಸಂಸತ್ತು ರಚನೆಯ ನಿಯೋಜಕರಾಗಿದ್ದು.ಈ ಸಂದರ್ಭದಲ್ಲಿ ಹೆಗ್ಗೆರೆ ಗ್ರಾ.ಪಂ. ಅಧ್ಯಕ್ಷ ರೇವಣ್ಣ ಹೆಚ್.ಎಸ್., ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಹೆಚ್.ಸಿ., ಉಪಾಧ್ಯಕ್ಷೆ ಶ್ರೀಮತಿ ತಸ್ಲೀಮಾ, ಸದಸ್ಯರುಗಳಾದ ವಾಜಿದ್ ಖಾನ್, ಈಶ್ವರಪ್ಪ, ಸುಬ್ಬಲಕ್ಷ್ಮಿ ಟಿ.ಆರ್. ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕ ವೃಂದದವರು ಹಾಜರಿದ್ದರು.