ಸಾರಾಂಶ
ಹಳೆಯ ಸರ್ಕಾರದ ಹಗರಣಗಳ ತನಿಖೆ ನಡೆಸಬೇಕಿತ್ತು ಎಂದರೆ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಯಾಕೆ ಸುಮ್ಮನೆ ಕುಳಿತ್ತಿತ್ತು ಕಾಂಗ್ರೆಸ್ ಸರ್ಕಾರ ಎಂದು ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ತನ್ನ ತಪ್ಪು ಮುಚ್ಚಿ ಹಾಕುವ ಉದ್ದೇಶದಿಂದ ಹಿಂದಿನ ಸರ್ಕಾರಗಳಲ್ಲಿನ ಹಗರಣಗಳ ತನಿಖೆಗೆ ಸಂಪುಟ ಉಪಸಮಿತಿ ರಚಿಸಿದೆ. ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ಕೀಳುಮಟ್ಟಕ್ಕೆ ಇಳಿದಿದೆ. ಇದು ನಾಚಿಕೆಗೇಡು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಳೆಯ ಸರ್ಕಾರದ ಹಗರಣಗಳ ತನಿಖೆ ನಡೆಸಬೇಕಿತ್ತು ಎಂದರೆ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಯಾಕೆ ಸುಮ್ಮನೆ ಕುಳಿತ್ತಿತ್ತು ಕಾಂಗ್ರೆಸ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ಬಿಜೆಪಿ ಹೆದರುವುದಿಲ್ಲ ಎಂದಿದ್ದಾರೆ. ಸಮಿತಿಗೆ ಸಚಿವರಾದ ಡಾ. ಜಿ. ಪರಮೇಶ್ವರ, ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ, ಸಂತೋಷ ಲಾಡ್ ಅವರನ್ನು ನೇಮಕ ಮಾಡಿದೆ. ಸಮಿತಿ ರಚನೆ ಹಿಂದೆ ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಹರಿಸುವ ದುರುದ್ದೇಶ ಇದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಜನತೆ ಕಣ್ಣುಮುಚ್ಚಿ ಕುಳಿತಿಲ್ಲ. ಸತ್ಯಾಸತ್ಯತೆಯ ಅರಿವು ಜನತೆಗಿದೆ. ಜನರನ್ನು ದಿಕ್ಕುತಪ್ಪಿಸುವ ನಿಮ್ಮ ಪ್ರಯತ್ನ ಎಂದಿಗೂ ಫಲಿಸದ ಕಾರ್ಯ. ಈ ವ್ಯರ್ಥ ಪ್ರಯತ್ನ ಬಿಟ್ಟು ಇಲ್ಲಿಯವರೆಗೆ ನಡೆದ ನಿಮ್ಮ ಸರ್ಕಾರದ ಹಗರಣಗಳ ತನಿಖೆ ಪಾರದರ್ಶಕವಾಗಿ ಆಗಲಿ. ಇಂತಹ ಹೆದರಿಕೆಗಳಿಗೆ ನಾವು ಎಂದಿಗೂ ಬಗ್ಗುವುದಿಲ್ಲ. ನಿಮ್ಮ ಹಗರಣಗಳ ವಿರುದ್ಧ ನಮ್ಮ ಹೋರಾಟ ಎಂದಿಗೂ ನಿಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ.