ಕ್ರಾಂತಿಕಾರಕ ನಿರ್ಣಯ ಕೈಗೊಂಡ ಅರಸು

| Published : Aug 21 2025, 02:00 AM IST

ಸಾರಾಂಶ

ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಉಳುವವನೇ ಹೊಲದ ಒಡೆಯ ಕಾರ್ಯಕ್ರಮದ ಮೂಲಕ ರೈತರ ಬದುಕಿಗೆ ಆಶಾಕಿರಣವಾಯಿತು.

ಕಾರಟಗಿ:

ಶ್ರೀಮಂತ ಅರಸು ಮನೆತನದಲ್ಲಿ ಹುಟ್ಟಿ ತಳಸಮುದಾಯದ ಏಳಿಗ್ಗೆಗೆ ಶ್ರಮಿಸಿ ಈ ದೇಶಕ್ಕೆ ಉಳುವವನೆ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ನಿರ್ಣಯ ಕೈಗೊಂಡ ಡಿ. ದೇವರಾಜು ಅರಸು ಈ ದೇಶಕಂಡ ಅಪ್ರತಿಮ ನಾಯಕ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲಿಸಿ ಮಾತನಾಡಿದರು.

ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಉಳುವವನೇ ಹೊಲದ ಒಡೆಯ ಕಾರ್ಯಕ್ರಮದ ಮೂಲಕ ರೈತರ ಬದುಕಿಗೆ ಆಶಾಕಿರಣವಾಯಿತು. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮೂಲ ಸೌಕರ್ಯ ಹೊಂದಿರುವ ವಸತಿ ನಿಲಯಗಳ ನಿರ್ಮಾಣ, ಮೀಸಲಾತಿ ನಿಯಮಗಳ ಮೂಲಕ ಹಿಂದುಳಿದ ವರ್ಗಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು ಎನ್ನುವುದು ಅರಸು ಮುಖ್ಯ ಧ್ಯೇಯವಾಗಿತ್ತು. ಅವರ ತತ್ವ-ಸಿದ್ಧಾಂತ, ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಹನೀಯರ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ತಾಲೂಕು ಅಧ್ಯಕ್ಷ ದೇವಪ್ಪ ಭಾವಿಕಟ್ಟಿ, ಸೋಮನಾಥ ನಾಯಕ, ಪರಮೇಶ್ವರಪ್ಪ ಕೋ. ಪಟೇಲ್, ನ್ಯಾಯವಾದಿ ಶೇಷಗಿರಿ ಕಟ್ಟೆಮನಿ ಸೇರಿದಂತೆ ಇದ್ದರು. ಜಯಂತಿಯಲ್ಲಿ ಭಾಗವಹಿಸಿದವರಿಗೆ ತಹಸೀಲ್ದಾರ್‌ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ತಹಸೀಲ್ದಾರ್‌ ಕಚೇರಿ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಸದಸ್ಯರು, ಸಿಬ್ಬಂದಿ ಇದ್ದರು.

ಪುರಸಭೆ:

ಪುರಸಭೆ ಕಚೇರಿಯಲ್ಲಿ ದೇವರಾಜು ಅರಸು ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಸೇರಿದಂತೆ ಕಚೇರಿಯ ಸಿಬ್ಬಂದಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ, ಅರಸು ಬಡವರ ಪರವಾಗಿದ್ದರು. ಬಡತನ ರೇಖೆಗಿಂತ ಕೆಳಗಿನವರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸದೃಢಗೊಳಿಸುವ ಗುರಿ ಹೊಂದಿದ್ದರು. ಈ ಮೂಲಕ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು. ಈ ವೇಳೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಪಂ ಕಚೇರಿ:

ತಾಲೂಕು ಪಂಚಾಯಿತಿಯಲ್ಲಿ ನಡೆದ ದೇವರಾಜು ಅರಸು ಜಯಂತಿಯಲ್ಲಿ ಇಒ ಲಕ್ಷ್ಮೀದೇವಿ ಅವರು ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅರಸು ಅವರ ವಿಚಾರಧಾರೆಗಳನ್ನು ಯುವಜನತೆ ಅಳವಡಿಸಿಕೊಳ್ಳುವ ಮೂಲಕ ಉನ್ನತ ಸ್ಥಾನ ಅಲಂಕರಿಸಬೇಕೆಂದು ಕರೆ ನೀಡಿದರು. ಈ ವೇಳೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.