ಮಾಜಿ ಸಿಎಂ ಎಚ್ಡಿಕೆ ಗೆದ್ರೆ ‘ಕಾವೇರಿ ನೀರಿನ’ ಸಮಸ್ಯೆಗೆ ಶಾಶ್ವತ ಪರಿಹಾರ

| Published : Apr 03 2024, 01:32 AM IST

ಮಾಜಿ ಸಿಎಂ ಎಚ್ಡಿಕೆ ಗೆದ್ರೆ ‘ಕಾವೇರಿ ನೀರಿನ’ ಸಮಸ್ಯೆಗೆ ಶಾಶ್ವತ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾಗುವುದು ಖಚಿತ. ನಾನು ಸೇರಿದಂತೆ ಬೇರೆ ಯಾರೇ ಅಭ್ಯರ್ಥಿಗಳಾಗಿ ಗೆದ್ದರೂ ಸಂಸದರಾಗಿ ಮಾತ್ರ ಕೆಲಸ ಮಾಡಬೇಕಾಗುತ್ತಿತ್ತು. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಗೆದ್ದರೆ ಕೇಂದ್ರದಲ್ಲಿ ಸಚಿವರಾಗಿ ಕಾವೇರಿ ನೀರಿನ ಸಮಸ್ಯೆ, ಮೇಕದಾಟು ಯೋಜನೆಗಳ ಪರಿಹಾರ ಪೂರಕವಾಗಿ ಕೆಲಸ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕಾವೇರಿ ಸಮಸ್ಯೆ ಹಾಗೂ ಮೇಕೆದಾಟು ಯೋಜನೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಜಂಟಿ ಕಾರ್‍ಯಕರ್ತರ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಕಾಂಗ್ರೆಸ್‌ನ ಹಣವಂತ ಹಾಗೂ ಮೈತ್ರಿ ಅಭ್ಯರ್ಥಿ ಹೃದಯವಂತ ನಡುವೆ ನಡೆಯುತ್ತಿದೆ ಎಂದರು.

ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾಗುವುದು ಖಚಿತ. ನಾನು ಸೇರಿದಂತೆ ಬೇರೆ ಯಾರೇ ಅಭ್ಯರ್ಥಿಗಳಾಗಿ ಗೆದ್ದರೂ ಸಂಸದರಾಗಿ ಮಾತ್ರ ಕೆಲಸ ಮಾಡಬೇಕಾಗುತ್ತಿತ್ತು. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು ಗೆದ್ದರೆ ಕೇಂದ್ರದಲ್ಲಿ ಸಚಿವರಾಗಿ ಕಾವೇರಿ ನೀರಿನ ಸಮಸ್ಯೆ, ಮೇಕದಾಟು ಯೋಜನೆಗಳ ಪರಿಹಾರ ಪೂರಕವಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರಾಗುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಹಾಗಾಗಿ ಜಿಲ್ಲೆಯ ಜನತೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.

2018ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಯುದ್ಧಕ್ಕೆ ನಿಲ್ಲಿಸಿ ಹಿಂದೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಆ ಚುನಾವಣೆಯಲ್ಲಿ ಬಿಜೆಪಿಯವರು ಸ್ವತಂತ್ರ ಅಭ್ಯರ್ಥಿ ಸುಮಲತಾರನ್ನು ಬೆಂಬಲ ಕೊಟ್ಟು ಗಂಡಸ್ಥನ ಪ್ರದರ್ಶಿಸಿ ಗೆಲ್ಲಿಸಿಕೊಂಡು ಬಂದರು ಎಂದರು.

ಕಾಂಗ್ರೆಸ್‌ನವರು ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವಂತೆ ಸಂಸದೆ ಸುಮಲತಾ ಅವರಿಗೆ ಅವಾಜ್ ಹಾಕುತ್ತಿದ್ದಾರೆ. ಆದರೆ, ನಿಮ್ಮಲ್ಲರ ಅವಾಜ್‌ಗಳಿಗೆ ನಮ್ಮ ಅಂಬರೀಶ್ ಅಣ್ಣ ಪತ್ನಿ ಸಂಸದೆ ಸುಮಲತಾ ಬಗ್ಗೋದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮೈತ್ರಿಯಿಂದ ಶಕ್ತಿಬಂದಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರು ಒಟ್ಟಾಗಿ ಕೆಲಸ ಮಾಡೋಣ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಅದರ ಅಣತಿಯಂತೆ ಕೆಲಸ ಮಾಡೋಣ. ಕಷ್ಟದ ರೊಟ್ಟಿಯಾದರು ಸರಿಯೇ. ತುಪ್ಪದ ರೊಟ್ಟಿಯಾದರು ಸರಿಯೇ ಹಂಚಿಕೊಂಡು ತಿನ್ನೋಣ ಎಂದು ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್ ಅವರಿಗೆ ಭರವಸೆ ನೀಡಿದರು.

ಕಾಂಗ್ರೆಸ್ ಸೇರುತ್ತೇನೆಂದು ಅಪಪ್ರಚಾರ:

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡಬೇಕು ಎಂದು ಗುಡುಗಿದರು.

ನಾರಾಯಣಗೌಡ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನುವ ವದಂತಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡೋದಿಲ್ಲ. ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಕೆಲಸ ಮಾಡಿ ಅಧಿಕ ಬಹುತದಿಂದ ಗೆಲ್ಲಿಸುವ ಕೆಲವನ್ನು ನಾವೆಲ್ಲರು ಸೇರಿ ಮಾಡೋಣ ಎಂದರು.

ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿಯಾಗಿದೆ. ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದಿಂದ ನಮಗೆ ಅನ್ಯಾಯ ಆಗೋದಿಲ್ಲ. ಎರಡು ಪಕ್ಷಗಳ ಕಾರ್‍ಯಕರ್ತರು ಒಟ್ಟಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ನಾಟಿ ತಳಿ ಹಾಗೂ ಹೈಬ್ರೀಡ್ ನಡುವೆ ಚುನಾವಣೆ:

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಮಂಡ್ಯದಲ್ಲಿ ನಾಟಿ ತಳಿ ಹಾಗೂ ಹೈಬ್ರೀಡ್ ನಡುವೆ ಚುನಾವಣೆ ನಡೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಶುದ್ಧ ನಾಟಿತಳಿ. ಜಿಲ್ಲೆಯ ಜನತೆ ಕಾವೇರಿ ನದಿ ರಕ್ಷಣೆಗಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಿಜೆಪಿ ಚುನಾವಣಾ ಉಸ್ತುವಾರಿ ಸುನೀಲ್‌ ಸುಬ್ರಹ್ಮಣ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚ್ ಅಧ್ಯಕ್ಷೆ ಮಂಗಳ ನವೀನ್‌ಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ, ಆನಂದ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ಕಣಿವೆ ಯೋಗೇಶ್, ನಿರಂಜನ್‌ಬಾಬು ಸೇರಿದಂತೆ ಪುರಸಭೆ ಸದಸ್ಯರು, ಎರಡು ಪಕ್ಷದ ಮುಖಂಡರು, ಕಾರ್‍ಯಕರ್ತರು ಭಾಗವಹಿಸಿದ್ದರು.