ಕನ್ನಡಪ್ರಭ ವಾರ್ತೆ ನಾಗಮಂಗಲ
ಬೆಂಗಳೂರಿನಿಂದ ಕೆ.ಆರ್.ಪೇಟೆಗೆ ತೆರಳುವ ಮಾರ್ಗ ಮಧ್ಯೆ ನಾಗಮಂಗಲ ಪಟ್ಟಣಕ್ಕೆ ಶನಿವಾರ ಬೆಳಗ್ಗೆ ಭೇಟಿ ಕೊಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅದ್ಧೂರಿ ಸ್ವಾಗತ ಕೋರಿ ಅಭಿನಂದಿಸಿದರು.ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣರ 86ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಗಮಂಗಲ ಪಟ್ಟಣದ ಮಾರ್ಗವಾಗಿ ಕೆ.ಆರ್.ಪೇಟೆಗೆ ತೆರಳುತ್ತಿದ್ದರು. ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಶಾಸಕ ಎನ್.ಚಲುವರಾಯಸ್ವಾಮಿ ಶನಿವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಕಾಂಗ್ರೆಸ್ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಪಟ್ಟಣದ ಮಂಡ್ಯ ವೃತ್ತದಲ್ಲಿ ಕಾಯ್ದು ನಿಂತಿದ್ದರು.
ಮಧ್ಯಾಹ್ನ 12.20ರ ವೇಳೆಗೆ ಪಟ್ಟಣದ ಮಂಡ್ಯ ವೃತ್ತಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಶಾಸಕ ಚಲುವರಾಯಸ್ವಾಮಿ ಶಾಲು ಹೊದಿಸಿ ರುದ್ರಾಕ್ಷಿ ಹಾರ ಹಾಕಿ ಅಭಿನಂದಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ನೆರೆದಿದ್ದ ಜನರತ್ತ ಕೈ ಬೀಸಿ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ ಅವರು ಶಾಸಕ ಚಲುವರಾಯಸ್ವಾಮಿ ಅವರನ್ನು ತಮ್ಮ ಕಾರಿನಲ್ಲೇ ಕೂರಿಸಿಕೊಂಡು ಕೆ.ಆರ್.ಪೇಟೆಯತ್ತ ಪ್ರಯಾಣ ಮುಂದುವರಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಬಿ.ಎನ್.ವನರಾಜ್, ಚಿಕ್ಕಮ್ಮ, ಸಾವಿತ್ರಮ್ಮ ಸೇರಿದಂತೆ ನೂರಾರು ಮಂದಿ ಇದ್ದರು.
ಮಾಜಿ ಸಿಎಂಗೆ ಸ್ವಾಗತ ಕೋರಿದ ಡೀಸಿ-ಎಸ್ಪಿ:
ಎಸ್‌ಐಆರ್ ನೋಂದಣಿ ಪ್ರಗತಿ ಪರಿಶೀಲನೆಗಾಗಿ ಡೀಸಿ ಡಾ.ಕುಮಾರ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಾರ್ಯನಿಮಿತ್ತ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರು ಶನಿವಾರ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರು ನಾಗಮಂಗಲ ಮಾರ್ಗವಾಗಿ ಕೆ.ಆರ್.ಪೇಟೆಗೆ ತೆರಳುತ್ತಿದ್ದರು. ಪಟ್ಟಣದ ಹೊರವಲಯದ ಎಆರ್‌ಟಿಒ ಕಚೇರಿ ಎದುರು ಮಾಜಿ ಸಿಎಂಗೆ ಡೀಸಿ, ಎಸ್ಪಿ ಹೂಗುಚ್ಚ ನೀಡಿ ಸ್ವಾಗತ ಕೋರಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಹಲಗೂರು ಸಮೀಪದ ಹಾಡ್ಲಿ ಮತ್ತು ಬಸವನಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಗಾಯಗೊಂಡು ಮಂಡ್ಯ ಮಿಮ್ಸ್ , ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.2028ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ
ಕೆ.ಆರ್.ಪೇಟೆ:ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಕೆ.ಆರ್.ಪೇಟೆಯಲ್ಲಿ ಮಾಜಿ ಸ್ಪೀಕರ್ ದಿ.ಕೃಷ್ಣರ 86ನೇ ಜನ್ಮದಿನದ ಅಂಗವಾಗಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರಾಜಕೀಯವಾಗಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ದುಡ್ಡುಕೊಟ್ಟು ಜನರು ಗೆಲ್ಲಿಸಿಕೊಂಡು ಬರುತ್ತಿದ್ದ ಕಾಲ ಮುಗಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದರು.
ದಿ.ಕೃಷ್ಣರನ್ನು ಕ್ಷೇತ್ರದ ಜನ ಬಯಸುತ್ತಿದ್ದರು. ಆದರೆ, ಅವರು ಕಲುಷಿತ ರಾಜಕೀಯ ವ್ಯವಸ್ಥೆಯಿಂದ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಜನ ಬಯಸುತ್ತಿರುವಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ ಕೃಷ್ಣ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋಗಿರುವ ರಾಜಕೀಯ ಆದರ್ಶಗಳು ನಮ್ಮ ಮುಂದಿವೆ. ಕೃಷ್ಣರಂತೆ ಬದುಕಿನ ಆದರ್ಶಗಳನ್ನು ಬಿಟ್ಟು ಹೋಗಿರುವವರ ನೆನಪಿನ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದು ಆಶಿಸಿದರು.