ಸೋಮವಾರಪೇಟೆ, ಶನಿವಾರಸಂತೆ ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಡಿಸಿಎಂ ಭೇಟಿ

| Published : Aug 03 2024, 12:36 AM IST

ಸೋಮವಾರಪೇಟೆ, ಶನಿವಾರಸಂತೆ ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಡಿಸಿಎಂ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆಯಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಕೊಳೆರೋಗಕ್ಕೆ ತುತ್ತಾಗಿರುವ ಕಾಫಿ ತೋಟವನ್ನು ಪರಿಶೀಲಿಸಿದ ಅಶ್ವಥ್ ನಾರಾಯಣ ಶನಿವಾರಸಂತೆ ವ್ಯಾಪ್ತಿಯಲ್ಲಿ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ, ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಶಾಂತಳ್ಳಿ ಹಾಗೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಮಳೆಗೆ ಹಾನಿಗೀಡಾದ ರಸ್ತೆ, ತೋಟ, ಮನೆಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಭೇಟಿಯಾಗಿ ಪರಿಶೀಲಿಸಿದರು.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆಯಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಕೊಳೆರೋಗಕ್ಕೆ ತುತ್ತಾಗಿರುವ ಕಾಫಿ ತೋಟವನ್ನು ಪರಿಶೀಲಿಸಿದ ಮಾಜಿ ಡಿಸಿಎಂ, ಶನಿವಾರಸಂತೆ ವ್ಯಾಪ್ತಿಯಲ್ಲಿ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ, ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.ಶಾಂತಳ್ಳಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಗುಡ್ಡ ಕುಸಿತದಿಂದ ಆಗಿರುವ ಅವಾಂತರಗಳನ್ನು ಪರಿಶೀಲಿಸಿದರು. ಶಾಂತಳ್ಳಿ ಹೋಬಳಿ ವ್ಯಾಪ್ತಿಯ, ಬಸವನಕಟ್ಟೆ, ನಗರಳ್ಳಿಯಲ್ಲಿ ಕಾಫಿ ತೋಟವನ್ನು ವೀಕ್ಷಿಸಿದರು.ಮಳೆ-ಗಾಳಿಗೆ ಕಾಫಿ ತೋಟದಲ್ಲಿ ಭಾರಿ ಪ್ರಮಾಣದ ನಷ್ಟವಾಗಿದ್ದು, ಮರಗಳು ಬಿದ್ದು ಕಾಫಿ ಗಿಡಗಳು ಮುರಿದಿರುವುದು ಒಂದೆಡೆಯಾದರೆ, ಅತಿಯಾದ ಮಳೆಗೆ ಕೊಳೆರೋಗ ಬಂದು ಕಾಫಿ ಕಾಯಿಗಳು ನೆಲಕ್ಕೆ ಬಿದ್ದಿರುವದರಿಂದ ಫಸಲು ನಷ್ಟ ಅನುಭವಿಸಬೇಕಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸ್ಥಳೀಯ ಕೃಷಿಕರು, ಶಾಸಕರಲ್ಲಿ ಮನವಿ ಮಾಡಿದರು.ಚೌಡ್ಲು ಗ್ರಾಮದ ಯೋಗೇಂದ್ರ ಅವರಿಗೆ ಸೇರಿದ ಕಾಫಿ ತೋಟ ಸಹಿತ ಬರೆ ಕುಸಿದಿದ್ದು, ಏಳೆಂಟು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಅಶ್ವಥ್ ನಾರಾಯಣ್ ಪರಿಶೀಲಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ಖುದ್ದು ವೀಕ್ಷಣೆ ಮಾಡಲಾಗಿದೆ‌. ಕಳೆದ ಅವಧಿಗಳಲ್ಲಿ ಮಳೆ ಹಾನಿಯಾದಾಗ, ಬಿಜೆಪಿ ಸರ್ಕಾರ ಹಾಗೂ ಕೊಡಗಿನಲ್ಲಿ ಈರ್ವರು ಬಿಜೆಪಿ ಶಾಸಕರಿದ್ದ ಸಂದರ್ಭ ತಕ್ಷಣ ಪರಿಹಾರ ಒದಗಿಸಲಾಗಿತ್ತು. ಸಂತ್ರಸ್ತರಿಗೆ ಸೂಕ್ತ ಸ್ಪಂದನೆ ನೀಡಲಾಗಿತ್ತು. ಈಗಿನ ಸರ್ಕಾರ ತುರ್ತು ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒತ್ತಾಯಿಸಲಾಗುವುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ತಾಲೂಕು ಅಧ್ಯಕ್ಷ ಗೌತಮ್, ಮಾಜಿ ಎಂಎಲ್‌ಸಿ ಮೇದಪ್ಪ, ಪ್ರಮುಖರಾದ ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಮೋಕ್ಷಿಕ್ ರಾಜ್, ಶನಿವಾರಸಂತೆ ಯತೀಶ್, ಹರೀಶ್ ಕುಮಾರ್, ಎಸ್.ಆರ್. ಸೋಮೇಶ್, ಹರಗ ಉದಯ್, ಕಿಬ್ಬೆಟ್ಟ ಮಧು, ಶರತ್ ಚಂದ್ರ ಮತ್ತಿತರರಿದ್ದರು.