ಗುರುಮಠಕಲ್‌ ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

| Published : Jan 29 2024, 01:31 AM IST

ಸಾರಾಂಶ

ಎಂದಿನಂತೆ ಬೆಳಗ್ಗೆ ಹಾಲು ಬಿಸ್ಕತ್‌ ಸೇವಿಸಿ, ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಸಹಜವಾಗಿ ಎಬ್ಬಿಸಲು ಕುಟುಂಬಸ್ಥರು ತೆರಳಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಕಿರಿಯ ಪುತ್ರ, ಗುರುಮಠಕಲ್‌ ಮತಕ್ಷೇತ್ರದ ಹಾಲಿ ಶಾಸಕ ಶರಣಗೌಡ ಕಂದಕೂರು ಅವರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರಾದರೂ, ಅಷ್ಟರಲ್ಲೇ ನಾಗನಗೌಡ ಕಂದಕೂರು ಕೊನೆಯುಸಿರೆಳೆದಿದ್ದರು.

ಕನ್ನಡಪ್ರಭ ವಾರ್ತೆ ಯಾದಗಿರಿ/ಗುರುಮಠಕಲ್‌

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪರಮಾಪ್ತರಲ್ಲೊಬ್ಬರಾದ, ಜನತಾ ಪರಿವಾರದ ಹಿರಿಯ ರಾಜಕೀಯ ಮುತ್ಸದ್ದಿ, ಗುರುಮಠಕಲ್‌ ಮತಕ್ಷೇತ್ರದ ಮಾಜಿ ಶಾಸಕ ನಾಗನಗೌಡ ಕಂದಕೂರು (78) ಅವರು ಯಾದಗಿರಿ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಂದಿನಂತೆ ಬೆಳಗ್ಗೆ ಹಾಲು ಬಿಸ್ಕತ್‌ ಸೇವಿಸಿ, ವಿಶ್ರಾಂತಿ ಪಡೆಯುತ್ತಿದ್ದ ಅವರನ್ನು ಸಹಜವಾಗಿ ಎಬ್ಬಿಸಲು ಕುಟುಂಬಸ್ಥರು ತೆರಳಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಕಿರಿಯ ಪುತ್ರ, ಗುರುಮಠಕಲ್‌ ಮತಕ್ಷೇತ್ರದ ಹಾಲಿ ಶಾಸಕ ಶರಣಗೌಡ ಕಂದಕೂರು ಅವರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರಾದರೂ, ಅಷ್ಟರಲ್ಲೇ ನಾಗನಗೌಡ ಕಂದಕೂರು ಕೊನೆಯುಸಿರೆಳೆದಿದ್ದರು.

ಮೃತರಿಗೆ ಪತ್ನಿ, ಹಿರಿಯ ಪುತ್ರ ಉದ್ಯಮಿ ಮಲ್ಲನಗೌಡ (ರಾಜು), ಪುತ್ರಿ ರೋಹಿಣಿ, ಕಿರಿಯ ಪುತ್ರ, ಗುರುಮಠಕಲ್‌ ಶಾಸಕ ಶರಣಗೌಡ ಸೇರಿ ಮೊಮ್ಮಕ್ಕಳು ಇದ್ದಾರೆ. ಸೋಮವಾರ ಜ.29ರಂದು ಮಧ್ಯಾಹ್ನ ಸ್ವಗ್ರಾಮ ಕಂದಕೂರಿನಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಿಧನ ಸುದ್ದಿ ತಿಳಿಯುತ್ತಲೇ ಆಸ್ಪತ್ರೆ ಹಾಗೂ ಯಾದಗಿರಿ ಅವರ ನಿವಾಸದತ್ತ ಜನಸಾಗರವೇ ಹರಿದುಬಂದಿತ್ತು. ಕುಟುಂಬದಲ್ಲಿ ಕಣ್ಣೀರ ಕಟ್ಟೆಯೊಡೆದಿದ್ದರೆ, ತಮ್ಮ ನಾಯಕನನ್ನು ಕಳೆದುಕೊಂಡ ಅವರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಬ್ಬೆತುಮಕೂರಿನ ಶ್ರೀಮಠದ ಶ್ರೀಗಳು ಮನೆಗೆ ಆಗಮಿಸಿ, ಸಾಂತ್ವನ ಹೇಳಿದರು. ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ್‌ ಸೇರಿ ಪಕ್ಷಭೇದ ಮರೆತು ರಾಜಕೀಯ ಮುಖಂಡರು ಅವರ ನಿವಾಸದತ್ತ ಹೆಜ್ಜೆ ಹಾಕಿದರು.

ರಾಜಕೀಯ ಹೆಜ್ಜೆಗಳು: 2008ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 9,208 ಮತಗಳ ಅಂತರದಿಂದ ಹಾಗೂ 2013ರಲ್ಲಿ 1650 ಮತಗಳ ಅಂತರದಿಂದ ಸೋಲು ಕಂಡಿದ್ದ ನಾಗನಗೌಡರು, ಈ ಸೋಲುಗಳನ್ನೇ ಸವಾಲಾಗಿ ಸ್ವೀಕರಿಸಿ 2018ರಲ್ಲಿ ಗುರುಮಠಕಲ್‌ ಮತಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಾಜಿ ಸಚಿವ ಕಾಂಗ್ರೆಸ್‌ ಪಕ್ಷದ ಬಾಬುರಾವ್‌ ಚಿಂಚನಸೂರು ವಿರುದ್ಧ 24,480 ಮತಗಳ ಅಂತರದಲ್ಲಿ ಗೆಲುವು ಕಂಡು, ವಿಧಾನಸಭೆ ಪ್ರವೇಶಿಸಿದ್ದರು. 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ನೇರ ಹಾಗೂ ನಿಷ್ಠುರ ಮಾತುಗಳ ಮೂಲಕ ಅನ್ಯಾಯಗಳ ವಿರುದ್ಧ ಸಿಡಿದೇಳುತ್ತಿದ್ದ ನಾಗನಗೌಡರು, ತಮ್ಮ ಅಣ್ಣ ದಿ. ಸದಾಶಿವರೆಡ್ಡಿ ಕಂದಕೂರು ಅವರಿಂದ ಪ್ರೇರಿತರಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡವರು. ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಪರಾಮಾಪ್ತ ವಲಯದಲ್ಲೊಬ್ಬರಾದ ನಾಗನಗೌಡರು, ಪಕ್ಷನಿಷ್ಠೆಗೆ ಹೆಸರುವಾಸಿ. ಮಾಜಿ ಮುಖ್ಯಮಂತ್ರಿಗಳಾದ ದಿ. ರಾಮಕೃಷ್ಣ ಹೆಗಡೆ ಹಾಗೂ ದಿ. ಜೆ.ಎಚ್. ಪಟೇಲ್ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ರೈತಪರ ಹೋರಾಟಗಳಲ್ಲಿ ಎಚ್‌. ಡಿ. ದೇವೇಗೌಡರೊಂದಿಗೆ ಪಾಲ್ಗೊಳ್ಳುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು.

ಅವಿಭಜಿತ ಗುಲ್ಬರ್ಗ ಜಿಲ್ಲೆ ವೇಳೆ, ಕಂದಕೂರ ಕ್ಷೇತ್ರದಿಂದ 1986 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, ಜಿಲ್ಲಾ ಪಂಚಾಯ್ತಿಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಇದು ಅವರ ರಾಜಕೀಯ ಕ್ಷೇತ್ರದ ಮೊದಲ ಮೆಟ್ಟಿಲು. 1998 ರಲ್ಲಿ ಎಪಿಎಂಸಿ ಸದಸ್ಯರಾಗಿ ಆಯ್ಕೆ, 2003ರ ವರೆಗೆ ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿದ್ದರು.

2007ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಈಗಿನ ಕೆಕೆಆರ್ಡಿಬಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2008ರಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಜೆಡಿಎಸ್‌ಗೆ ನಿಷ್ಠೆ: ರಾಜಕೀಯದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯ. ಆದರೆ, ಕೊನೆಯುಸಿರಿರುವರೆಗೂ ಜೆಡಿಎಸ್‌ ಪಕ್ಷದಲ್ಲೇ ಇರುವೆ ಎಂದು ಸದಾ ನುಡಿಯುತ್ತಿದ್ದ ನಾಗನಗೌಡ ಕಂದಕೂರು, ಅನೇಕ ಸಂದರ್ಭಗಳಲ್ಲಿ ಪಕ್ಷ ಸೇರ್ಪಡೆಗೆ ಕರೆಗಳು, ಕಷ್ಟದ ಸಂದರ್ಭದದಲ್ಲಿ ಬಂದ ಆಮಿಷ-ಅವಕಾಶಗಳನ್ನು ನಿರಾಕರಿಸಿ ಪಕ್ಷನಿಷ್ಠೆಯನ್ನು ಕಾಪಾಡಿಕೊಂಡು, ಮಾತು ಉಳಿಸಿಕೊಂಡವರು.

ಸಮ್ಮಿಶ್ರ ಸರ್ಕಾವಧಿಯಲ್ಲಿ, ಎಚ್ಡಿಕೆ ಸರ್ಕಾರ ಪತನಗೊಳಿಸಲು "ಆಪರೇಶನ್‌ ಕಮಲ "ದ ಕರೆಗೆ ನಾಗನಗೌಡರು ಸೊಪ್ಪು ಹಾಕಿರಲಿಲ್ಲ. ಅಂದು, ಜೆಡಿಎಸ್‌ ಯುವ ಘಟಕದ ನಾಯಕರಾಗಿದ್ದ ಪುತ್ರ ಹಾಲಿ ಶಾಸಕ, ಶರಣಗೌಡ ಕಂದಕೂರು ಆಪರೇಶನ್‌ ಕಮಲದ ಕರೆಯನ್ನು ಬಹಿರಂಗವಾಗಿಸಿ ಎಚ್ಡಿಕೆ ಸರ್ಕಾರದ ಉಳಿವಿಗೆ ಕಾರಣರಾಗಿದ್ದರು. ಇಂತಹ ಪಕ್ಷನಿಷ್ಠೆಯ ಕಾರಣಕ್ಕೆ ಎಚ್ಡಿಡಿ ಹಾಗೂ ಎಚ್ಡಿಕೆ ಅವರಿಗೆ ಕಂದಕೂರು ಕುಟುಂಬ ತೀರ ಹತ್ತಿರ.

2023ರ ವಿಧಾನಸಭೆ ಚುನಾವಣೆಯ ವೇಳೆ ಪಕ್ಷ ಹೆಸರು ಘೋಷಿಸಿತ್ತಾದರೂ, ವಯೋಸಹಜ ಕಾರಣಗಳಿಂದ ನಿರಾಕರಿಸಿದ್ದ ನಾಗನಗೌಡ ಕಂದಕೂರು ಅವರು ಟಿಕೆಟ್‌ ಅನ್ನು ಪುತ್ರ ಶರಣಗೌಡಗೆ ನೀಡುವಂತೆ ವರಿಷ್ಠರಿಗೆ ತಿಳಿಸಿದ್ದರು. ಇದರಂತೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಗಲಿರುಳೂ ಶ್ರಮಿಸಿ ನಾಗನಗೌಡರು, ಪುತ್ರ ಶರಣಗೌಡ ಗೆಲುವಿನ ಹಿಂದಿನ ರೂವಾರಿ ಎಂದೆನಿಸಿದ್ದರು.

ಕಳೆದ ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೆಡಿಎಸ್‌ ವರಿಷ್ಠರ ಆದೇಶದ ಮೇರೆಗೆ ಬೆಂಬಲಿಸಿದ್ದರು.

ಕಂದಕೂರು ಕುಟುಂಬದ ರಾಜಕೀಯ ಶತ್ರುವೆಂದೇ ಕರೆಯಲ್ಪಡುತ್ತಿದ್ದ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಗನಗೌಡ ಕಂದಕೂರು ಅವರ ನಡುವಿನ ಕಲಹ ಮುಗಿಯುವುದೇ ಇಲ್ಲ ಎಂದು ಭಾವಿಸಿದ್ದ ರಾಜಕೀಯ ಚರ್ಚೆಗಳನ್ನೇ ತಲೆಕೆಳಗಾಗಿಸಿದ್ದ ಖರ್ಗೆ ಅವರು, ಚುನಾವಣೆ ವೇಳೆ ಯಾದಗಿರಿಯ ಕಂದಕೂರು ಅವರ ನಿವಾಸಕ್ಕೆ ಆಗಮಿಸಿ, ಕುಶಲೋಪರಿ ವಿಚಾರಿಸಿದ್ದರು. ಇದು ಈ ಇಬ್ಬರೂ ರಾಜಕಾರಣಿಗಳ ಹಳಿಸಿದ ಸಂಬಂಧವನ್ನು ಚಿಗರಿಸಿ, ಎಲ್ಲ ಮರೆತು ಹಸಿರಾಗಿಸಲು ಕಾರಣವಾಗಿತ್ತು.