ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆ : 6 ಗಂಟೆ ಕಾಲ ಸಾಗಿದ ಅಂತಿಮ ಯಾತ್ರೆ

| Published : Dec 12 2024, 12:33 AM IST / Updated: Dec 12 2024, 09:41 AM IST

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆ : 6 ಗಂಟೆ ಕಾಲ ಸಾಗಿದ ಅಂತಿಮ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

  ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಮಂಡ್ಯ ಸೇರಿ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಆಗಮಿಸಿದ್ದ ಸಾವಿರಾರು ಜನ ಕಂಬನಿ ಮಿಡಿದರು. ಅಭಿಮಾನ, ಗೌರವದಿಂದ ಎಸ್.ಎಂ.ಕೃಷ್ಣ ಅವರಿಗೆ ಜಯವಾಗಲಿ, ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆಗಳನ್ನು ಕೂಗಿದರು.

 ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಮಂಡ್ಯ ಸೇರಿ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಆಗಮಿಸಿದ್ದ ಸಾವಿರಾರು ಜನ ಕಂಬನಿ ಮಿಡಿದರು. ಅಭಿಮಾನ, ಗೌರವದಿಂದ ಎಸ್.ಎಂ.ಕೃಷ್ಣ ಅವರಿಗೆ ಜಯವಾಗಲಿ, ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆಗಳನ್ನು ಕೂಗಿದರು.

ಬುಧವಾರ ಬೆಳಗ್ಗೆ ಬೆಂಗಳೂರಿನಿಂದ 8.30ಕ್ಕೆ ವಿಶೇಷ ಅಲಂಕೃತ ವಾಹನದಲ್ಲಿ ಹೊರಟ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನ ಪುಷ್ಪನಮನ, ಗೌರವ ನಮನ ಸಲ್ಲಿಸಿದರು. ವಾಹನದ ಕಡೆ ಹೂವುಗಳನ್ನು ಎಸೆದು ಕೈಮುಗಿದರು. ಮಾರ್ಗದುದ್ದಕ್ಕೂ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಂಘ-ಸಂಸ್ಥೆಗಳು, ಸಂಘಟನೆಗಳ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಪೆಂಡಾಲ್‌ ಹಾಕಿಸಿದ ಜಿಲ್ಲಾಡಳಿತ:

ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜಿಲ್ಲಾಡಳಿತದಿಂದ ಪೆಂಡಾಲ್ ಹಾಕಿಸಿ ಸರದಿ ಸಾಲಿನಲ್ಲಿ ನಿಂತು ಪಾರ್ಥಿವ ಶರೀರದ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10ರ ಸುಮಾರಿಗೆ ಬಿಡದಿ ಪ್ರವೇಶಿಸಿದ ಪಾರ್ಥಿವ ಶರೀರವನ್ನು ಬಿಜಿಎಸ್ ವೃತ್ತದಲ್ಲಿ 10 ನಿಮಿಷ ನಿಲ್ಲಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ ಅಲ್ಲಿಂದ ಹೊರಟ ವಾಹನ 10.45ರಲ್ಲಿ ರಾಮನಗರ ಪ್ರವೇಶಿಸಿತು. ಮಾರ್ಗ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ನಗರ, ಗಾಂಧಿ ನಗರ, ರೇಷ್ಮೆ ಮಾರುಕಟ್ಟೆ ಬಳಿ ವಾಹನ ಸಂಚಾರ ನಿಧಾನಗೊಳಿಸಲಾಯಿತು. ಸಾರ್ವಜನಿಕರು ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

11.10ಕ್ಕೆ ಐಜೂರು ವೃತ್ತಕ್ಕೆ ಆಗಮಿಸಿದಾಗ ನೆರೆದಿದ್ದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳ ಅಂತಿಮ ನಮನಕ್ಕಾಗಿ 15 ನಿಮಿಷ ಅವಕಾಶ ಕಲ್ಪಿಸಲಾಯಿತು. ನಂತರ ವಾಹನ ಚನ್ನಪಟ್ಟಣ ಕಡೆ ಸಾಗಿತು.ಚನ್ನಪಟ್ಟಣದಲ್ಲಿ ಸಾವಿರಾರು ಜನ:

ಚನ್ನಪಟ್ಟಣ ಮುಖ್ಯರಸ್ತೆಯ ವೃತ್ತದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಯೋಗೀಶ್ವರ್ ಸ್ಥಳದಲ್ಲೇ ಉಪಸ್ಥಿತರಿದ್ದರು. ಪಾರ್ಥಿವ ಶರೀರ ಆಗಮಿಸುವ ಮೊದಲೇ ಸಾವಿರಾರು ಜನ ಸ್ಥಳದಲ್ಲಿ ಸೇರಿದ್ದರು. ಪಾರ್ಥಿವ ಶರೀರ ಬರುತ್ತಿದ್ದಂತೆ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಪಾರ್ಥಿವ ಶರೀರವಿದ್ದ ವಾಹನ ಸೋಮನಹಳ್ಳಿ ಕಡೆ ಹೊರಟಿತು.

ಮದ್ದೂರಲ್ಲಿ ಬಂದ್‌ ಆಚರಿಸಿ ಗೌರವ:

ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಊರಿನ ಮಗ ಎಸ್.ಎಂ.ಕೃಷ್ಣ ಅವರಿಗೆ ಮದ್ದೂರಿನ ಜನ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಮರ್ಪಿಸಿದರು. ಪಾರ್ಥಿವ ಶರೀರವಿದ್ದ ವಾಹನ ಅಂತ್ಯಕ್ರಿಯೆ ನಡೆವ ಸೋಮನಹಳ್ಳಿ ತಲುಪುವಾಗ ಮಧ್ಯಾಹ್ನ 2.15 ಆಗಿತ್ತು.