ಸಾರಾಂಶ
ಕಾರವಾರ: ನಗರದ ಸಂತೆ ಮಾರುಕಟ್ಟೆಯ ನಡು ರಸ್ತೆಯಲ್ಲಿ ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕರ (62) ಅವರನ್ನು ಭಾನುವಾರ ಬೆಳಿಗ್ಗೆ ಇಬ್ಬರು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕಡಲತೀರಕ್ಕೆ ವಾಯುವಿಹಾರಕ್ಕೆ ಸತೀಶ ಕೊಳಂಬಕರ ಹೋಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಸತೀಶ ಜತೆ ವಾಗ್ವಾದ ನಡೆಸಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಭವನದ ಎದುರು ವಿಕೋಪಕ್ಕೆ ಹೋಗಿದೆ. ಏಕಾಏಕಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದ ಸತೀಶ ಕೊಳಂಬಕರ ಅವರನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ.
ಹಂತಕರ ಸುಳಿವು:ಕೊಲೆಯಾದ ಸತೀಶ ಕೊಳಂಬಕರ ಹಂತಕರ ಸುಳಿವು ದೊರಕಿದೆ. ಸಿಸಿಟಿವಿ ಕೂಡ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ವರಿಷ್ಠ ನಾರಾಯಣ ಎಂ. ತಿಳಿಸಿದ್ದಾರೆ.
ಸತೀಶ ಕೊಳಂಬಕರ ರೌಡಿಶೀಟರ್ ಆಗಿದ್ದ. ಈತನ ಮೇಲೆ 9 ಪ್ರಕರಣಗಳಿವೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ವಾರದ ಹಿಂದೆ ನಗರದ ಹೊಟೇಲೊಂದರಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಹಾಗೂ ಕೊಳಂಬಕರ ನಡುವೆ ಗಲಾಟೆ ಆಗಿದೆ. ಅವರು ಕೊಳಂಬಕರಗೆ ₹2 ಲಕ್ಷ ನೀಡಿದ್ದರು. ಆದನ್ನು ವಾಪಸ್ ಕೊಡುವಂತೆ ಕೇಳಿದಾಗ ಗಲಾಟೆ ಆಗಿದೆ. ಈ ಬಗ್ಗೆಯೂ ತನಿಖೆ ನಡೆಸುತ್ತೇವೆ. ಆ ಇಬ್ಬರೇ ಭಾನುವಾರ ಬೆಳಿಗ್ಗೆ ಬಂದು ಹಣ ಮರಳಿಸುವಂತೆ ಕೇಳಿದ್ದಾರೆ. ಹಣ ಕೊಡದೇ ಇದ್ದಾಗ ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಹತ್ಯೆಯಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.ಭಾನುವಾರದ ಸಂತೆಗೆಂದೇ ಹಾವೇರಿ, ಧಾರವಾಡ ಮತ್ತಿತರ ಕಡೆಗಳ ಮಾರಾಟಗಾರರು ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ರಾಶಿ ಹಾಕಿಕೊಂಡು ಮಾರಾಟದಲ್ಲಿ ನಿರತರಾಗಿದ್ದಾರೆ. ಕೆಲ ಗ್ರಾಹಕರು ಕಾಯಿಪಲ್ಲೆ ಕೊಳ್ಳುತ್ತಿದ್ದಾರೆ. ಬೆಳಗ್ಗೆ 8.10ರ ಸುಮಾರಿಗೆ ಏಕಾಏಕಿ ಗಲಾಟೆ ಆರಂಭವಾಗಿದೆ. ಒಬ್ಬರು ಚೂರಿಯಿಂದ ಕೊಳಂಬಕರಗೆ ಇರಿಯುತ್ತಿದ್ದಂತೆ ಕೆಲ ತರಕಾರಿ ಮಾರಾಟಗಾರರು ತಡೆಯಲೂ ಮುಂದಾಗಿದ್ದಾರೆ. ಆದರೆ ಆರೋಪಿಗಳು ಇವರನ್ನು ಲೆಕ್ಕಿಸದೇ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.