ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ವಿಧಾನ ಪರಿಷತ್ ಮಾಜಿ ಸದಸ್ಯ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾಪಿಸಿದ ನಗರದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾರುತಿರಾವ್ ಡಿ. ಮಾಲೆ (84) ಅವರು ಮಂಗಳವಾರ ತಮ್ಮ ಮನೆಯಲ್ಲಿ ನಿಧನರಾದರು. ಕೆಲ ಕಾಲದಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು.ಶಿಕ್ಷಣ ಪ್ರೇಮಿ ಸಮಾಜಸೇವಕ ರಾಜಕಾರಣಿ ಆಗಿದ್ದ ಡಾ. ಮಾರುತಿ ರಾವ್ ಮಾಲೆಯವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಡಿ.27ರಂದು ಮಾಲೆಯವರ ಪಾರ್ಥೀವ ಶರೀರವನ್ನು ಬೆಳಗ್ಗೆ 10 ಗಂಟೆಯಿಂದ ಅವರ ಶಾಂತಿ ನಗರದಲ್ಲಿರುವ ಸ್ವಗೃಹದಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂದೇ ಸಂಜೆ ಸಂಜೆ ನಾಲ್ಕು ಗಂಟೆಗೆ ಹಡಗಿಲ ಹಾರುತಿ ಹತ್ತಿರವಿರುವ ಅವರ ತೋಟದಲ್ಲಿ ಸಮಾಧಿ ಮಾಡಲಾಗುವುದೆಂದು ಎಂದು ಅವರ ಪುತ್ರ ಗಿರೀಶ್ ಮಾಲೆ ಹೇಳಿದ್ದಾರೆ.ಬೀದರ್ ಜಿಲ್ಲೆಯ ತಾಲೂಕಿನ ಘಾಟ್ ಬೋರ್ಡ್ ಗ್ರಾಮದಲ್ಲಿ ಜನಿಸಿದ ಮಾಲೆಯವರು ಕಲ್ಬುರ್ಗಿಯ ಅವರ ಸೋದರ ಮಾವ ನವರ ಭುಜಂಗ ರಾವ್ ಮನೆಯಲ್ಲಿ ಇದ್ದು ಅತ್ತೆ ಮಿಂಚಾ ಬಾಯಿಯವರ ಮಾರ್ಗದರ್ಶನದಲ್ಲಿ ಬೆಳೆದವರು. ನೂತನ ವಿದ್ಯಾಲಯ ಶಾಲೆಯಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಮುಗಿಸಿದ ಮಾಲೆಯವರು ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಪದವಿಯನ್ನು ಪಡೆದವರು ಆರಂಭದಲ್ಲಿ ಸರ್ಕಾರಿ ನೌಕರರಾಗಿದ್ದು ಸೇವೆ ಸಲ್ಲಿಸಿ ನಂತರ ಸಾರ್ವಜನಿಕ ಜೀವನಕ್ಕೆ ಧುಮುಕಿದ್ದರು.
ದಲಿತ ನಾಯಕ ಬಿ. ಶಾಮಸುಂದರ ಅವರ ಪ್ರಭಾವಕ್ಕೊಳಗಾಗಿ ಹಾಸ್ಟೆಲ್ ವಾರ್ಡನ್ ಹುದ್ದೆಗೆ ತಿಲಾಂಜಲಿ ನೀಡಿದ ಮಾರುತಿರಾವ್ ಅವರು 1968ರಲ್ಲಿ ದಲಿತ ಚಳವಳಿಗೆ ಧುಮುಕಿ ಭೀಮಸೇನೆಯ ಖಜಾಂಚಿಯಾಗಿ ಕೆಲಸ ಮಾಡಿದ್ದರು. ಮೂಲತಹ ಬೀದರ್ ಜಿಲ್ಲೆಯ ಘಾಟಬೋರಾಳ ಗ್ರಾಮದ ಮಾಲೆ ಅವರು ಹೈದರಾಬಾದ್ ನಿಜಾಮರ ಖಾಸಗಿ ಸೈನ್ಯ ರಜಾಕಾರರ ವಿರುದ್ಧ ಹೋರಾಡಿದ್ದರು.ತುಮಕೂರಿನ ಸಿದ್ಧಾರ್ಥ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ 20 ವರ್ಷ ಕಾರ್ಯನಿರ್ವಹಿಸಿದ್ದ ಮಾಲೆ ಅವರು ಕಲಬುರಗಿಯ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಸಮಿತಿ ಕಾರ್ಯದರ್ಶಿಯಾಗಿದ್ದರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪ್ರತಿಮೆ ಅನಾವರಣಗೊಳಿಸಿದ್ದರು.
ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಸಂಜೆ 4ಕ್ಕೆ ಕಲಬುರಗಿ ಹೊರವಲಯದ ಹಡಗಿಲ್ ಹಾರುತಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ.ದಿ. ಮಾರುತಿ ಮಾಲೆಯವರು ತುಮಕೂರು ಜಿಲ್ಲೆಯ ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 20 ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ ಪರಮೇಶ್ವರ್ ಅವರೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಮಾಲೆ ಕೈ ಜೋಡಿಸಿದ್ದರು.
ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದ ಮಾಲೆಯವರು, ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಕೆಲಸ ಮಾಡಿದ್ದರು. ಇತ್ತೀಚಿಗೆ ಕೊನೆಯ ದಿನಗಳಲ್ಲಿ ಒಬ್ಬ ಆದರ್ಶ ರೈತರಾಗಿ ಪಪ್ಪಾಯ ಬೆಳೆದು ಬಹುಮಾನವನ್ನು ಪಡೆದಿದ್ದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಕಂಬನಿ: ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾರುತಿರಾವ್ ಮಾಲೆ ಇವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ ರವರು ತೀವ್ರ ಸಂತಾಪ ಸೂಚಿಸಿದ್ದಾರೆ.
ದುಃಖದ ಮಡಿಲಲ್ಲಿರುವ ಅವರ ಕುಟುಂಬದ ಸದಸ್ಯರಿಗೆ ದುಃಖ ಸಹಿಸಿಕೊಳ್ಳುವಂತ ಶಕ್ತಿ ಆ ಭಗವಂತನು ನೀಡಲೆಂದು ಪ್ರಾರ್ಥಿಸುತ್ತಾ ಕಾಂಗ್ರೆಸ್ ಪಕ್ಷ ಒಬ್ಬ ಹಿರಿಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಜಗದೇವ ಗುತ್ತೇದಾರ ಕಾಳಗಿ ರವರು ಇವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿ ಶೋಕ ವ್ಯಕ್ತಪಡಿಸಿದ್ದಾರೆ.ಶಾಸಕ ಅಲ್ಲಂಪ್ರಭು ಪಾಟೀಲ್ ಶೋಕ: ಅದೇ ರೀತಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರು ಮಾಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಾಲೆಯವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಅಲ್ಲಂಪ್ರಭು ಪಾಟೀಲರು ಪ್ರಾರ್ಥಿಸಿದ್ದಾರೆ.
ಅತ್ಯಂತ ಮಾನವಿಯ ಅನುಕಂಪವುಳ್ಳ ಮಾಲೆ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಇವರ ಕುರಿತಂತೆ ಅಭಿನಂದನಾ ಗ್ರಂಥ ಹೊರ ತಂದಿರುವ ಪ್ರೊ. ಶಿವರಾಜ ಪಾಟೀಲರು ಕಂಬನಿ ಮಿಡಿದಿದ್ದಾರೆ.