ಮಾಜಿ ಮೇಯರ್ ಪುತ್ರ, ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ

| Published : Mar 06 2024, 02:17 AM IST

ಮಾಜಿ ಮೇಯರ್ ಪುತ್ರ, ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಗಾಂಧಿನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ರಘು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ: ಜನ್ಮದಿನದ ನಿಮಿತ್ತ ರಸ್ತೆಯಲ್ಲಿ ಕೇಕ್ ಕತ್ತರಿಸುವ ಸಂಭ್ರಮದ ವೇಳೆ ನಡೆದ ಗಲಾಟೆಯಲ್ಲಿ ಮಾಜಿ ಮೇಯರ್ ನಾಗಮ್ಮ ಅವರ ಪುತ್ರ ರಘು ಮತ್ತು ಆತನ ಬೆಂಬಲಿಗರು ನಡೆಸಿದ ಮಾರಣಾಂತಿಕ ಹಲ್ಲೆಯಿಂದ ತಿಪ್ಪೇಸ್ವಾಮಿ ಎಂಬ ಯುವಕ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಇಲ್ಲಿನ ಗಾಂಧಿನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ರಘು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ರಾಮಯ್ಯ ಕಾಲನಿ ನಿವಾಸಿಯಾಗಿರುವ ಮಾಜಿ ಮೇಯರ್ ನಾಗಮ್ಮ ಅವರ ಪುತ್ರ ರಘು ಅವರ ಜನ್ಮದಿನದ ನಿಮಿತ್ತ ಆತನ ಬೆಂಬಲಿಗರು ಮಾರುತಿ ಕಾಲನಿಯ ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದೇ ಪ್ರದೇಶದ ನಿವಾಸಿ ತಿಪ್ಪೇಸ್ವಾಮಿ ಎಂಬ ಯುವಕ ರಸ್ತೆಯಲ್ಲಿ ಅಡ್ಡವಾಗಿ ಜನ್ಮದಿನ ಆಚರಣೆ ಮಾಡುವುದನ್ನು ಪ್ರಶ್ನಿಸಿದ್ದಾರಲ್ಲದೆ, ರಸ್ತೆಬಿಟ್ಟು ಆಚರಣೆ ಮಾಡಿ ಎಂದು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ರಘು ಬೆಂಬಲಿಗರು ತಿಪ್ಪೇಸ್ವಾಮಿ ನಡುವೆ ವಾಗ್ವಾದ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಮಾಜಿ ಮೇಯರ್ ನಾಗಮ್ಮ ಪುತ್ರ ರಘು ಸೇರಿದಂತೆ ಆತನ ಬೆಂಬಲಿಗರು ಬಡಿಗೆ ಮತ್ತಿತರ ಆಯುಧಗಳಿಂದ ತಿಪ್ಪೇಸ್ವಾಮಿಯನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಘು, ಅನಿಲ್ ಕುಮಾರ್, ಮುತ್ತು, ಭಾಸ್ಕರ್, ರಾಜಶೇಖರ್, ಬಾಲು, ರಾಜು ಬಂಧನವಾಗಿದೆ. ಇನ್ನು ನಾಲ್ಕು ಜನರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಲ್ವಾರ್ ಹಿಡಿದು ಮಾಜಿ ಮೇಯರ್ ಪುತ್ರನ ಹುಚ್ಚಾಟ...

ಇಲ್ಲಿನ ಹುಸೇನ್ ನಗರ ಪ್ರದೇಶದಲ್ಲಿ ನಡೆದ ಜನ್ಮದಿನ ಆಚರಣೆಯಲ್ಲಿ ಮಾಜಿ ಮೇಯರ್ ನಾಗಮ್ಮ ಪುತ್ರ ರಘು ತಲ್ವಾರ್ ಹಿಡಿದು ಹುಚ್ಚಾಟ ನಡೆಸಿದ್ದಾನೆ. ಡಿಜೆ ಹಾಕಿಕೊಂಡು ತಲ್ವಾರ್ ಹಿಡಿದು ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ.