ಶಾಸಕ ಸಿ. ಟಿ. ರವಿ ಬಂಧನ ಸರಿಯಲ್ಲ, ಕೂಡಲೇ ಬಿಡುಗಡೆ ಮಾಡಿ : ಹೈಕೋರ್ಟ್‌ ಪೊಲೀಸರಿಗೆ ತಾಕೀತು

| Published : Dec 21 2024, 01:17 AM IST / Updated: Dec 21 2024, 06:53 AM IST

ಶಾಸಕ ಸಿ. ಟಿ. ರವಿ ಬಂಧನ ಸರಿಯಲ್ಲ, ಕೂಡಲೇ ಬಿಡುಗಡೆ ಮಾಡಿ : ಹೈಕೋರ್ಟ್‌ ಪೊಲೀಸರಿಗೆ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌, ಅವರನ್ನು ಇದ್ದ ಸ್ಥಳದಲ್ಲೇ ತಕ್ಷಣ ಬಿಡುಗಡೆ ಮಾಡುವಂತೆ ಪೊಲೀಸರಿಗೆ ತಾಕೀತು ಮಾಡಿದೆ.

  ಬೆಂಗಳೂರು : ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದ ಪರಿಣಾಮ ಬಂಧಿತರಾಗಿದ್ದ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌, ಅವರನ್ನು ಇದ್ದ ಸ್ಥಳದಲ್ಲೇ ತಕ್ಷಣ ಬಿಡುಗಡೆ ಮಾಡುವಂತೆ ಪೊಲೀಸರಿಗೆ ತಾಕೀತು ಮಾಡಿದೆ. ಜೊತೆಗೆ ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಸಿ.ಟಿ.ರವಿ ಅವರು ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಜೊತೆಗೆ, ‘ಸಿ.ಟಿ. ರವಿ ಅವರು ವಿಧಾನ ಪರಿಷತ್‌ ಹಾಲಿ ಸದಸ್ಯ, ಅಂತಹವರು ತಲೆಮರೆಸಿಕೊಂಡು ತನಿಖೆಗೆ ಅಲಭ್ಯವಾಗುವಂಥ ಪರಿಸ್ಥಿತಿ ಇರಲಿಲ್ಲ. ಹೀಗಿದ್ದರೂ ತರಾತುರಿಯಲ್ಲಿ ಬಂಧಿಸಿರುವ ರೀತಿ ಸರಿಯಲ್ಲ ಎಂದು ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ಚಾಟಿ ಬೀಸಿದೆ.

ಪ್ರಕರಣ ಸಂಬಂಧ ತಮ್ಮನ್ನು ಬಂಧನ ಮಾಡಿರುವ ಪೊಲೀಸರ ಕ್ರಮವನ್ನು ಅಕ್ರಮವೆಂದು ಘೋಷಿಸಬೇಕು ಹಾಗೂ ಕೂಡಲೇ ತಮ್ಮನ್ನು ಬಂಧಮುಕ್ತಗೊಳಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಿ.ಟಿ. ರವಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ ಈ ಆದೇಶ ಮಾಡಿದೆ.

ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಪ್ರಕರಣ ಸಂಬಂಧ ಗುರುವಾರ ರಾತ್ರಿಯಷ್ಟೇ ಬಂಧನಕ್ಕೆ ಒಳಗಾಗಿದ್ದ ಸಿ.ಟಿ.ರವಿ ಅವರಿಗೆ ಒಂದೇ ದಿನದಲ್ಲಿ ಬಿಡುಗಡೆ ಭಾಗ್ಯ ಸಿಕ್ಕಿದೆ. ಜೊತೆಗೆ ಬಂಧನದ ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

ಹೈಕೋರ್ಟ್‌ ಚಾಟಿ:

ಪರಿಷತ್‌ ಶಾಸಕ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ‘ಸಿ.ಟಿ. ರವಿ ಅವರು ವಿಧಾನ ಪರಿಷತ್‌ ಹಾಲಿ ಸದಸ್ಯ, ಅಂತಹವರು ತಲೆಮರೆಸಿಕೊಂಡು ತನಿಖೆಗೆ ಅಲಭ್ಯವಾಗುವಂಥ ಪರಿಸ್ಥಿತಿ ಇರಲಿಲ್ಲ. ಹೀಗಿದ್ದರೂ ತರಾತುರಿಯಲ್ಲಿ ಬಂಧಿಸಿರುವ ರೀತಿ ಸರಿಯಲ್ಲ. ಅವರನ್ನು ಬಂಧಿಸುವ ವೇಳೆ ಪೊಲೀಸರು ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಪೊಲೀಸರ ಕಾರ್ಯವೈಖರಿಯನ್ನು ಕೋರ್ಟ್‌ ವಿಮರ್ಶಿಸಿದೆ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಇಂತಹ ವಿವಾದಿತ ಘಟನೆ ನಡೆದಿರುವುದು ದುರದೃಷ್ಟಕರ ಎಂದೂ ಅಭಿಪ್ರಾಯ ಪಟ್ಟಿದೆ.

ಇದಕ್ಕೂ ಮುನ್ನ ಸಿ.ಟಿ. ರವಿ ಅವರ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿ, ರವಿ ಅವರನ್ನು ಬೆಳಗಾವಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಪೊಲೀಸ್‌ ನೋಟಿಸ್‌ ನೀಡುವುದು ಅಥವಾ ಅವರ ಬಂಧನಕ್ಕೆ ಆಧಾರ/ಕಾರಣ ಒದಗಿಸಿಲ್ಲ. ಇದು ಅರುಣ್‌ ಕುಮಾರ್‌ ಮತ್ತು ಬಿಹಾರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿರುವ ತೀರ್ಪಿಗೆ ವಿರುದ್ಧವಾಗಿದೆ. ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಅರ್ನಾಬ್‌ ಗೋಸ್ವಾಮಿ ಪ್ರಕರಣದಲ್ಲೂ ನ್ಯಾಯಾಲಯ ನೀಡಿರುವ ತೀರ್ಪಿನಂತೆ ತಕ್ಷಣ ಬಿಡುಗಡೆಗೆ ರವಿ ಅರ್ಹರಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸರ್ಕಾರ (ಪೊಲೀಸರ) ಪರ ಹಾಜರಿದ್ದ ರಾಜ್ಯ ಸರ್ಕಾರಿ ಅಭಿಯೋಜಕ ಎಸ್‌.ಎ.ಬೆಳ್ಳಿಯಪ್ಪ, ರವಿ ಅವರನ್ನು ಟ್ರಾನ್ಸಿಟ್‌ ರಿಮ್ಯಾಂಡ್‌ ಮೇಲೆ ಬೆಳಗಾವಿಯಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಜಾಮೀನು ಕೋರಿ ಅರ್ಜಿದಾರರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ. ಆ ನ್ಯಾಯಾಲಯದಲ್ಲಿ ವಿಚಾರಣೆ ಸಹ ನಡೆಯುತ್ತಿದ್ದು, ಅದರಲ್ಲಿ ಹೈಕೋರ್ಟ್‌ ಹಸ್ತಕ್ಷೇಪ ಮಾಡಬಾರದು. ಬಂಧನ ಅಕ್ರಮ ಎನ್ನುವುದಾದರೆ ಅವರು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಬಹುದು. ಪೊಲೀಸರ ಜೊತೆ ರವಿ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಬೆಳ್ಳಿಯಪ್ಪ ಆಕ್ಷೇಪಿಸಿದರು.

ಆಗ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಹಾಗೂ ಅವರು ಗಾಯಗೊಂಡಿರುವ ರೀತಿಗೆ ಬಗ್ಗೆ ಏನು ಉತ್ತರಿಸುತ್ತೀರಿ ಎಂದು ರಾಜ್ಯ ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಸಿ.ಟಿ. ರವಿ ಅವರನ್ನು ಬಂಧಿಸುವ ವೇಳೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 41ಎ ಅಡಿಯಲ್ಲಿ ಪೊಲೀಸ್‌ ನೋಟಿಸ್‌ ನೀಡಬೇಕಿತ್ತು. ಈ ಪ್ರಕ್ರಿಯೆಯನ್ನು ಪೊಲೀಸರು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ವಿಧಾನ ಪರಿಷತ್‌ ಹಾಲಿ ಸದಸ್ಯರಾಗಿರುವ ಕಾರಣ ಸಿ.ಟಿ. ರವಿ ಅವರು ತಲೆಮರಿಸಿಕೊಂಡು ತನಿಖೆಗೆ ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್‌ನಲ್ಲಿ ನಡೆದಿರುವ ಘಟನೆ ಬಗ್ಗೆ ಸಭಾಪತಿಗಳು ಏನನ್ನೂ ಉಲ್ಲೇಖಿಸಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅಲ್ಲದೆ, ಘಟನೆ ಕುರಿತು ದೂರು ನೀಡಿರುವ ದೂರುದಾರರು ಎಫ್‌ಐಆರ್‌ನಲ್ಲಿ ಎಲ್ಲಾ ಮಾಹಿತಿ ಉಲ್ಲೇಖಿಸಿಲ್ಲ. ಪ್ರಕರಣವನ್ನು ಪೊಲೀಸರು ಸಹ ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ. ಗಂಭೀರ ಅಪರಾಧ ಪ್ರಕರಣಗಳಲ್ಲೂ ಪೊಲೀಸರು ವರ್ಷಗಟ್ಟಲೆ ಬಂಧಿಸುವುದಿಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಹರಣವಾದಾಗ ಅದನ್ನು ರಕ್ಷಿಸುವುದು ಹೈಕೋರ್ಟ್‌ ಕರ್ತವ್ಯ. ದೂರುದಾರರು ಮತ್ತು ಅರ್ಜಿದಾರರು ಇಬ್ಬರೂ ಜನಪ್ರತಿನಿಧಿಗಳು. ದುರದೃಷ್ಟಕರ ಬೆಳವಣಿಗೆ ಎಂದರೆ ಅವರಿಬ್ಬರೂ ರಾಜ್ಯದ ನಾಯಕರೇ ಆಗಿದ್ದಾರೆ ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದರು.

ಅಂತಿಮವಾಗಿ ರವಿ ಅವರನ್ನು ಕೂಡಲೇ ಬಿಡುಗಡೆಗೆ ಮಾಡಬೇಕು ಎಂದು ಪೊಲೀಸರಿಗೆ (ಸರ್ಕಾರ) ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.