ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಬೇಬಿಗ್ರಾಮದ ದುರ್ದಂಡೇಶ್ವರ ಮಠದ ಆವರಣದಲ್ಲಿ ಜ.26, 27 ಹಾಗೂ 28 ರಂದು ನಡೆಯುವ ಶ್ರೀಮರೀದೇವರು ಸ್ವಾಮೀಜಿಗಳ 130 ಜಯಂತಿ ಹಾಗೂ ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳ 25ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದ ‘ಧರ್ಮಜಾಗೃತಿ ಯಾತ್ರೆ ಪ್ರಚಾರ ರಥಕ್ಕೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಡಾ. ತ್ರಿನೇಂತ್ರಮಹಂತಶಿವಯೋಗಿ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕಾವೇರಿ ಮಡಿಲಿನಲ್ಲಿರುವ ಚಂದ್ರವನ ಆಶ್ರಮವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಬುದ್ಧ ಮಾನಕ್ಕೆ ಬರುತ್ತಿದೆ. ಮಠದ ಭಕ್ತರ ಸಹಕಾರದಿಂದ ಮಠವು ನಿತ್ಯ ಹೊಸ ರೂಪ ಪಡೆದುಕೊಳ್ಳುತ್ತಿದೆ ಎಂದರು.ಮಠದಲ್ಲಿ ಒಂದೇ ಬಾರಿ 1 ಸಾವಿರ ಮಂದಿ ಯೋಗ, ಧ್ಯಾನ ಮಾಡುವ ಯೋಗ ಮಂದಿರ ನಿರ್ಮಾಣವಾಗುತ್ತಿದೆ. ಮರಿದೇವರು ಸ್ವಾಮೀಜಿಗಳ ಜ್ಞಾನಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಜ.27ರಂದು ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರಮಹಂತ ಸ್ವಾಮೀಜಿಗಳ ಪಾದ ಪೂಜೆಯೊಂದಿಗೆ ಕಾರ್‍ಯಕ್ರಮ ಆರಂಭಗೊಂಡು ಹಲವಾರು ಧಾರ್ಮಿಕ ಕಾರ್‍ಯಕ್ರಮಗಳು ಜರುಗಲಿವೆ. ನಾಡಿನ ವಿವಿಧ ಮಠಗಳಿಂದ ಮಠಾಧೀಶರು ಆಗಮಿಸಿ ಪೂಜೆಗಳಲ್ಲಿ ಪಾಲ್ಗೊಂಡು ವಾಸ್ತವ್ಯ ಇರಲಿದ್ದಾರೆ ಎಂದರು.ಜ.28ರಂದು ಬೆಳಗ್ಗೆ ಮಠದ ಆವರಣದಲ್ಲಿ ನಿರ್ಮಿಸಿರುವ ಆಯುರ್ವೇಧ ಆಸ್ಪತ್ರೆಯ ಉದ್ಘಾಟನೆ ನಡೆಯಲಿದೆ. ರಾಜ್ಯದ ಮಂತ್ರಿಗಳು, ಶಾಸಕರು ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿಗಳು, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದಮಹಾ ಸ್ವಾಮೀಜೀಗಳು, ಸುತ್ತೂರು ಮಠದ ದೇಶೀಕೇಂದ್ರ ಸ್ವಾಮೀಜಿಗಳ ಭಾಗವಹಿಸಲಿದ್ದಾರೆ ಎಂದರು.
ಚಂದ್ರವನ ಆಶ್ರಮದ ಮೂಲಮಠ ಬೇಬಿಗ್ರಾಮ ಆಗಿರುವುದರಿಂದ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಠದ ಭಕ್ತರು, ಸಾರ್ವಜನಿಕರು ಕಾರ್‍ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಡಾ.ತ್ರಿನೇಂತ್ರಮಹಂತ ಶಿವಯೋಗಿ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗಸ್ವಾಮಿ ಪ್ರವಚನ ನೀಡಿದರು.ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಮಾಜಿ ಅಧ್ಯಕ್ಷ ಶಿಂಢಬೋಗನಹಳ್ಳಿ ನಾಗಣ್ಣ, ಸಾಹಿತಿ ವಾಣಿಚಂದ್ರಯ್ಯನಾಯ್ಡು, ಮಠದ ಕಾರ್‍ಯದರ್ಶಿ ಟಿ.ಪಿ.ಶಿವಕುಮಾರ್ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.