ಮಾಜಿ ಸಚಿವ, ಮಾಜಿ ಉಪಸಭಾಧ್ಯಕ್ಷ ಮನೋಹರ ತಹಸೀಲ್ದಾರ್ ಇನ್ನಿಲ್ಲ

| Published : Nov 22 2024, 01:15 AM IST

ಸಾರಾಂಶ

ಮಾಜಿ ಸಚಿವ, ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ, ನಾಲ್ಕುಬಾರಿ ಹಾನಗಲ್‌ ಕ್ಷೇತ್ರದಿಂದ ಜಯ ಸಾಧಿಸಿದ್ದ ಸಜ್ಜನ ರಾಜಕಾರಣಿ ಅಕ್ಕಿವಳ್ಳಿಯ ಮನೋಹರ ತಹಶೀಲ್ದಾರ (78) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ಬೆಳಗಿನಜಾವ ಕೊನೆ ಉಸಿರೆಳೆದರು.

ಹಾನಗಲ್ಲ: ಮಾಜಿ ಸಚಿವ, ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ, ನಾಲ್ಕುಬಾರಿ ಹಾನಗಲ್‌ ಕ್ಷೇತ್ರದಿಂದ ಜಯ ಸಾಧಿಸಿದ್ದ ಸಜ್ಜನ ರಾಜಕಾರಣಿ ಅಕ್ಕಿವಳ್ಳಿಯ ಮನೋಹರ ತಹಶೀಲ್ದಾರ (78) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ಬೆಳಗಿನಜಾವ ಕೊನೆ ಉಸಿರೆಳೆದರು.

೪೦ ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ಮನೋಹರ ತಹಶೀಲ್ದಾರ ಅಜಾತ ಶತ್ರು ಎನಿಸಿದ್ದರು. ಸೋಲು-ಗೆಲುವುಗಳಲ್ಲಿ ಎಲ್ಲರನ್ನೂ ಒಳಗೊಂಡು ರಾಜಕಾರಣದ ಹೆಜ್ಜೆ ಹಾಕಿದ್ದ ಅವರು ಕಾಂಗ್ರೆಸ್‌ನಲ್ಲಿ ತೀವ್ರ ಮನನೊಂದು ಒಲ್ಲದ ಮನಸ್ಸಿನಿಂದ ಜೆಡಿಎಸ್‌ ಸೇರಿ ವಿಧಾನಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಪರಾಭವಗೊಂಡರು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು.

ಬಿಇ ಪದವೀಧರರಾದ ಅವರು ೧೯೭೮ರಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ್ದರು. ಆನಂತರ ಸಚಿವರಾಗಿ, ವಿಧಾನಸಭೆ ಉಪಸಭಾಪತಿಯಾಗಿ ಅಧಿಕಾರ ನಡೆಸಿದ ಮನೋಹರ ತಹಶೀಲ್ದಾರ, ಜನಸಾಮಾನ್ಯರ, ಬಡವರ ಪ್ರೀತಿಗೆ ಪಾತ್ರರಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ರಾಜಕೀಯ ಇತಿಹಾಸದಲ್ಲಿ ಹೊಸ ಛಾಪು ಮೂಡಿಸಿದ್ದರು.

೯ ಬಾರಿ ವಿಧಾನಸಭಾ ಚುನಾವಣೆಗೆ ಹಾನಗಲ್ಲ ಕ್ಷೇತ್ರದಿಂದ ಸ್ಪರ್ಧಿಸಿ, ನಾಲ್ಕು ಬಾರಿ (೧೯೭೮, ೧೯೮೯, ೧೯೯೯, ೨೦೧೩) ಗೆಲುವು ಸಾಧಿಸಿ, ಶಾಸಕರಾಗಿದ್ದರು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ೨೦೧೫ರಲ್ಲಿ ಅಬಕಾರಿ ಸಚಿವರಾಗಿದ್ದರು. ಅಖಂಡ ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಈ ಅವಧಿಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸರ್ಕಾರ ರಚನೆಗೆ ಶಕ್ತಿ ತುಂಬಿದ್ದರು.

೨೦೧೮ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ಪಕ್ಷದ ಪರವಾಗಿ ಕಟಿಬದ್ಧರಾಗಿ ನಿಂತಿದ್ದರು. ಆದರೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿಯಾದರು. ೨೦೨೪ರಲ್ಲಿ ನಡೆದ ಲೋಕಸಭಾ ಚುನಾವಣೆ ಹೊತ್ತಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.

ಅವರು ಕೊನೆಯ ವರೆಗೂ ಸಕ್ರಿಯ ರಾಜಕಾರಣದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಕಟ್ಟಾ ರಾಜಕಾರಣಿ. ಹಾನಗಲ್ಲ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಮನೋಹರ ತಹಶೀಲ್ದಾರ ಹಾಗೂ ಸಿ.ಎಂ. ಉದಾಸಿ ಅವರ ನಡುವೆ ಸಾಂಪ್ರದಾಯಿಕ ಪೈಪೋಟಿ ಸುದೀರ್ಘ ಅವಧಿ ವರೆಗೆ ಹೆಸರು ಮಾಡಿತ್ತು.

ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಜ್ಜನ ರಾಜಕಾರಣಿ, ಬಡವರ ಬಗೆಗೆ ಅಪಾರ ಕಾಳಜಿ. ಪ್ರಬಲ ಜನಾಂಗದ ಸಮೂಹ ಇಲ್ಲದಿದ್ದರೂ ನಾಲ್ಕು ಬಾರಿ ಶಾಸಕರಾಗಿದ್ದು ಅವರ ಮೇರು ವ್ಯಕ್ತಿತ್ವದ ಪ್ರತೀಕ. ನಮ್ಮ ತಂದೆ ಸಿ.ಎಂ. ಉದಾಸಿ ಅವರ ರಾಜಕಿಯ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಎಲ್ಲ ಸಂದರ್ಭಗಳಲ್ಲಿ ಒಟ್ಟಾಗಿ ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದರು ಎಂದು ಮಾಜಿ ಸಂಸದ ಶಿವಕುಮಾರ ಉದಾಸಿ ಶೋಕ ವ್ಯಕ್ತಪಡಿಸಿದ್ದಾರೆ.ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ಅಗಲಿಕೆ ರಾಜಕಾರಣದಲ್ಲಿ ತುಂಬಲಾರದ ನಷ್ಟವಾಗಿದೆ. ಸುದೀರ್ಘ ರಾಜಕೀಯ ಇತಿಹಾಸ ಹೊಂದಿದ್ದ ಅವರು ಮಾರ್ಗದರ್ಶಿ ರಾಜಕಾರಣಿಯಾಗಿದ್ದರು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತತ್ವಾಧಾರಿತ ನಿಷ್ಪಕ್ಷಪಾತ ನಿಷ್ಠಾವಂತ ರಾಜಕಾರಣಿ. ಸಿ.ಎಂ. ಉದಾಸಿಯವರ ನಂತರ ಹಿರಿಯ ರಾಜಕಾರಣಿಯಾಗಿ ತಾಲೂಕಿಗೆ ಮಾರ್ಗದರ್ಶಿಯಾಗಿದ್ದರು. ಪಕ್ಷಾತೀತವಾಗಿ ಎಲ್ಲರನ್ನೂ ಪ್ರೀತಿಸುವ ಮನೋಹರ ತಹಶೀಲ್ದಾರ ಬಡವರ ಬಂಧುವಾಗಿದ್ದರು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಸಂತಾಪ ಸೂಚಿಸಿದ್ದಾರೆ.