ಮಾದಿಗ ಎಂದು ಬರೆಸದಿದ್ದಲ್ಲಿ ಮೀಸಲಾತಿ ಸೌಲಭ್ಯ ಸಿಗರದು

| Published : May 18 2025, 01:43 AM IST

ಮಾದಿಗ ಎಂದು ಬರೆಸದಿದ್ದಲ್ಲಿ ಮೀಸಲಾತಿ ಸೌಲಭ್ಯ ಸಿಗರದು
Share this Article
  • FB
  • TW
  • Linkdin
  • Email

ಸಾರಾಂಶ

ಮಾದಿಗ ಸಮುದಾಯದವರು ಯಾವುದೇ ಕಾರಣಕ್ಕೂ ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಯಿಸಬಾರದು. ಒಂದು ವೇಳೆ ಹಾಗೆ ಬರೆಸಿದರೂ ಉಪಜಾತಿ ಕಾಲಂನಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಯಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಒಳ ಮೀಸಲಾತಿ ಜಾರಿಗಾಗಿ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಮಾದಿಗ ಸಂಬಂಧಿಕ ಜಾತಿಗಳು ಮಾದಿಗ ಎಂದು ಬರೆಯಿಸದೇ ಹೋದರೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಎಚ್ಚರಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದವರು ಯಾವುದೇ ಕಾರಣಕ್ಕೂ ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಯಿಸಬಾರದು. ಒಂದು ವೇಳೆ ಹಾಗೆ ಬರೆಸಿದರೂ ಉಪಜಾತಿ ಕಾಲಂನಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಯಿಸಬೇಕು ಎಂದು ಹೇಳಿದರು.ಇಂದು ಹುಟ್ಟಿದ ನವಜಾತ ಶಿಶುವನ್ನೂ ಜಾತಿ ಗಣತಿಗೆ ಸೇರಿಸಬೇಕು. ಯಾರೊಬ್ಬರೂ ಜಾತಿ ಗಣತಿಯಿಂದ ಹೊರಗುಳಿಯಬಾರದು. ಮಾದಿಗ ಸಮುದಾಯ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ, ಮೀಸಲಾತಿ, ಉದ್ಯೋಗ, ಶಿಕ್ಷಣ ಸೌಲಭ್ಯವನ್ನು ಪಡೆಯುವುದಕ್ಕಾಗಿ ಒಳಮೀಸಲಾತಿ ಅಗತ್ಯವಾಗಿರುವುದರಿಂದ ಮಾದಿಗ ಎಂದು ಬರೆಯಲು ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದರು.ಎಸ್ಸಿ ಕೆಟಗರಿಯಲ್ಲಿರುವ 101 ಜಾತಿಗಳಿವೆ. ಈ ಕೆಟಗರಿಗೆ ಸೇರಿದ ಮಾದಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಆದಕಾರಣ ಪ್ರಬಲ ಸಮುದಾಯಗಳ ನಡುವೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಅಗತ್ಯವಿದೆ ಎಂದು ಅವರು ತಿಳಿಸಿದರು.ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಆಗುವವರೆವಿಗೂ ಯಾವುದೇ ಸರ್ಕಾರಿ ಹುದ್ದೆಯನ್ನೂ ನೇಮಿಸುವುದಿಲ್ಲ. ಒಳಮೀಸಲಾತಿ ಜಾರಿಯಾದ ನಂತರವೇ ಸರ್ಕಾರ ಹುದ್ದೆಗಳನ್ನು ನೇಮಕ ಮಾಡುತ್ತದೆ. ಪರಿಶಿಷ್ಟ ಸಮುದಾಯಗಳ ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸಿ ಬೇಕಿರುವ ಕಾರಣದಿಂದ ಜಾತಿ ಸಮೀಕ್ಷೆ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾಮಾಜಿಕ ನ್ಯಾಯಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇರುವುದರಿಂದ ಆದಷ್ಟು ಬೇಗ ಜಾರಿಯಾಗಿ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಲಿದೆ ಎಂದು ಅವರು ಹೇಳಿದರು.ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಸದಸ್ಯ ಆರ್. ಧರ್ಮಸೇನ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಮಾಜಿ ಮೇಯರ್ ನಾರಾಯಣ, ವಕೀಲ ರಂಗನಾಥ್ ಪ್ರಸಾದ್, ಮುತ್ತುರಾಜ್, ಹರೀಶ್, ಎಡತೊರೆ ನಿಂಗರಾಜ್ ಮೊದಲಾದವರು ಇದ್ದರು.----ಕೋಟ್...ಪರಿಶಿಷ್ಟರಲ್ಲದ ಹಲವು ಜಾತಿಗಳು ಒಳ ಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಜಾತಿಗೆ ನುಸುಳುವ ಮೂಲಕ ಮೀಸಲಾತಿ ಲಾಭ ಪಡೆಯಲು ಹುನ್ನಾರ ಮಾಡುತ್ತಿವೆ. ಬೇಡ ಜಂಗಮ ಸಮುದಾಯವನ್ನು ಸ್ಪೃಶ್ಯ ಸಮುದಾಯವಾಗಿದೆ. ಹೀಗಾಗಿ, ಬೇಡ ಜಂಗಮರನ್ನು ಎಸ್ಸಿ ಮೀಸಲಾತಿ ಪಟ್ಟಿಯಿಂದ ರಾಜ್ಯ ಸರ್ಕಾರ ತೆಗೆದು ಹಾಕಬೇಕು. ಪರಿಶಿಷ್ಟ ಜಾತಿಗೆ ಸೇರದ ಸಮುದಾಯದವರು ಪರಿಶಿಷ್ಟ ಜಾತಿ ಗಣತಿಯಲ್ಲಿ ತಮ್ಮ ಹೆಸರು ನೋಂದಾಯಿಸುವುದು ಕಂಡು ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.- ಎಚ್. ಆಂಜನೇಯ, ಮಾಜಿ ಸಚಿವ