ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ ಈ ಭಾಗದ ರೈತರ ಕಲ್ಪವೃಕ್ಷ ಎನಿಸಿರುವ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ಖಾಸಗಿ ಕಂಪನಿಗೆ ಲೀಜ್ ಮೇಲೆ ನೀಡಬಾರದು. ಈಗಿರುವ ಸಹಕಾರಿ ತತ್ವದಡಿಯಲ್ಲೇ ಮುಂದುವರಿಸಬೇಕು ಎಂದು ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಈ ಭಾಗದ ರೈತರ ಕಲ್ಪವೃಕ್ಷ ಎನಿಸಿರುವ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ಖಾಸಗಿ ಕಂಪನಿಗೆ ಲೀಜ್ ಮೇಲೆ ನೀಡಬಾರದು. ಈಗಿರುವ ಸಹಕಾರಿ ತತ್ವದಡಿಯಲ್ಲೇ ಮುಂದುವರಿಸಬೇಕು ಎಂದು ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಒತ್ತಾಯಿಸಿದರು.ಪಟ್ಟಣದಲ್ಲಿ ಗುರುವಾರ ರೈತರ ಸಭೆ ನಡೆಸಿ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ತತ್ವದಲ್ಲಿ ಸ್ಥಾಪನೆಯಾಗಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಸ್ತುತ ಆಡಳಿತ ಮಂಡಳಿ ದಿವಾಳಿ ಅಂಚಿನಲ್ಲಿ ತಂದು ನಿಲ್ಲಿಸಿದೆ ಎಂದು ದೂರಿದರು.ಕಳೆದ 30 ವರ್ಷಗಳ ಹಿಂದೆ ಈ ಕಾರ್ಖಾನೆ ಆರ್ಥಿಕವಾಗಿ ಸದೃಢವಾಗಿತ್ತು. ಆದರೆ, ಈಗ ಕತ್ತಿ ಕುಟುಂಬದ ಹಿಡಿತ ಮತ್ತು ಮಿತಿಮೀರಿದ ಭ್ರಷ್ಟಾಚಾರದಿಂದ ಕಾರ್ಖಾನೆ ಆರ್ಥಿಕವಾಗಿ ನಷ್ಟದಲ್ಲಿದೆ. ಕಾರಣ ರೈತರು ಜಾಗೃತರಾಗಿ ಹೋರಾಟ ನಡೆಸಬೇಕು. ದಿ.ಅಪ್ಪಣಗೌಡ ಪಾಟೀಲರು ಸ್ಥಾಪಿಸಿದ ಈ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕು ಎಂದವರು ಹೇಳಿದರು.1995 ರಲ್ಲಿ ಕೇವಲ ₹70 ಕೋಟಿ ಇದ್ದ ಸಾಲ ಈಗ ₹812 ಕೋಟಿಗೆ ತಲುಪಿದೆ. ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲಾಗದ ಪರಿಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಸದಸ್ಯರು, ನೌಕರರು, ಕಾರ್ಖಾನೆಯ ಪ್ರತಿ ಕಟ್ಟಡಗಳ ಮೇಲೆ ಸಾಲ ತೆಗೆಯಲಾಗಿದೆ. ಕಾರ್ಖಾನೆಯ ಕಾಲೋನಿಗಳು ರಿಪೇರಿಯಿಲ್ಲದೆ ದನಗಳ ಕೊಟ್ಟಿಗೆಯಾಗಿವೆ ಎಂದವರು ಆಕ್ರೋಶ ಹೊರಹಾಕಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮುಖಂಡರಾದ ಭೀಮಣ್ಣ ರಾಮಗೋನಟ್ಟಿ, ಮಲಗೌಡ ಪಾಟೀಲ, ವಿರೂಪಾಕ್ಷಿ ಮರೆಣ್ಣವರ, ಅಣ್ಣಾಗೌಡ ಪಾಟೀಲ, ಸುಭಾಷ ನಾಯಿಕ, ಸಲೀಂ ಕಳಾವಂತ, ಸುರೇಶ ಜನ್ಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.