ಸಾರಾಂಶ
ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಏರ್ಪಟ್ಟಿರುವ ಟಿಕೆಟ್ ಸಮರ ಜಿಲ್ಲಾದ್ಯಂತ ಕಾಂಗ್ರೆಸ್ ನಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದ್ದು, ಪಕ್ಷದೊಳಗೆ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಇದು ಈಗ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ್ದು ಟಿಕೆಟ್ ಘೋಷಣೆ ನಂತರ ಉಂಟಾಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಾಜಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಗೆ ಕಾಂಗ್ರೆಸ್ ಹೈಕಮಾಂಡ್ ಕರೆ ಮಾಡಿ ದೆಹಲಿಗೆ ಕರೆಸಿಕೊಂಡಿದ್ದು, ಶುಕ್ರವಾರ ಶಿವಶಂಕರ್ ರೆಡ್ಡಿ ದೆಹಲಿಗೆ ತೆರಳಿದ್ದಾರೆ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ದೆಹಲಿಗೆ ಕಾಂಗ್ರೆಸ್ ಹೈಕಮಾಂಡ್ ಕರೆಯಿಸಿಕೊಂಡಿದ್ದು, ನವದೆಹಲಿಯ ರಾಜಾಜಿಮಾರ್ಗನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ನಿವಾಸದಲ್ಲಿ, ಖರ್ಗೆಯವರನ್ನು ಶಿವಶಂಕರ್ ರೆಡ್ಡಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಏರ್ಪಟ್ಟಿರುವ ಟಿಕೆಟ್ ಸಮರ ಜಿಲ್ಲಾದ್ಯಂತ ಕಾಂಗ್ರೆಸ್ ನಲ್ಲಿ ಬಣಗಳ ಸೃಷ್ಟಿಗೆ ಕಾರಣವಾಗಿದ್ದು, ಪಕ್ಷದೊಳಗೆ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಇದು ಈಗ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ್ದು ಟಿಕೆಟ್ ಘೋಷಣೆ ನಂತರ ಉಂಟಾಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದೆಲ್ಲದರ ನಡುವೆ ಗೌರಿಬಿದನೂರಿನ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು,ಬಿಜೆಪಿಯತ್ತ ತೆರಳುವುದಾಗಿ ಸಂದೇಶ ಹರಿ ಬಿಟ್ಟಿದ್ದರು.
ಶಿವಶಂಕರರೆಡ್ಡಿಯ ಬಿಜೆಪಿ ಮುಖಂಡರ ಜತೆಗಿನ ರಹಸ್ಯ ಸಮಾಲೋಚನೆಯೂ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದು. ರಾಜ್ಯ ಮುಖಂಡರ ನಿರ್ಲಕ್ಷ್ಯದ ಬಗ್ಗೆ ಬಹಿರಂಗವಾಗಿಯೇ ಗುಡುಗುವ ಮೂಲಕ ಕಾಂಗ್ರೆಸ್‌ಗೆ ಪರೋಕ್ಷ ಸಂದೇಶವನ್ನು ರವಾನಿಸಿದ್ದರು. ಹೀಗಾಗಿ ಶಿವಶಂಕರರೆಡ್ಡಿಯವರು ಪಕ್ಷ ಬಿಟ್ಟರೆ ಹಿನ್ನಡೆಯಾಗಬಹುದು ಎಂಬುದು ಕಾಂಗ್ರೆಸ್ ನ ರಾಜ್ಯ ಮುಖಂಡರಿಗೆ ಗೊತ್ತಿದೆ. ಈಗಾಗಲೇ ಅವರನ್ನು ಸಮಾಧಾನಿಸುವ ಕೆಲಸವೂ ನಡೆದಿದೆ. ಹೀಗಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗದ ಕಾರಣ ಕ್ಷೇತ್ರದಲ್ಲಿ ಬಣ ರಾಜಕಾರಣ ಜೋರಾಗಿದೆ.ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಗೆ ದೆಹಲಿ ವರಿಷ್ಠರು ಕರೆ ಮಾಡಿ ಕರೆಸಿಕೊಂಡಿದ್ದಾರೆಂದು ಶಿವಶಂಕರ ರೆಡ್ಡಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಶಿವಶಂಕರ ರೆಡ್ಡಿ ಮನವೂಲಿಸುವ ಕಾರ್ಯಕ್ಕೆ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಯತ್ನಿಸಿದ್ದು, ಶಿವಶಂಕರ ರೆಡ್ಡಿಗೆ ಯಾವುದಾದರೂ ಉನ್ನತ ಸ್ಥಾನಕ್ಕೆ ನೇಮಕ ಮಾಡುವ ಕುರಿತು ಸಹಾ ಆಶ್ವಾಸನೆಯನ್ನು ಖರ್ಗೆ ನೀಡಿದ್ದಾರೆಂದು, ಆದರೆ ಶಿವಶಂಕರರೆಡ್ಡಿ ತನಗೆ ಲೋಕಸಭಾ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆಂದು ತಿಳಿದುಬಂದಿದೆ.