ಸಾರಾಂಶ
ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದ ರಾಜ್ಯದ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ (91) ಬೆಂಗಳೂರಿನ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದ ರಾಜ್ಯದ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ (91) ಬೆಂಗಳೂರಿನ ಸ್ವಗೃಹದಲ್ಲಿ ಸೋಮವಾರ ನಿಧನರಾಗಿದ್ದಾರೆ.ಬಂಟ್ವಾಳ ತಾಲೂಕಿನ ಬಾಕ್ರಬೈಲಿನಲ್ಲಿ 1934ರ ಏ.4ರಂದು ಜನಿಸಿದ್ದ ಸುಬ್ಬಯ್ಯ ಶೆಟ್ಟಿ, ಮುಖ್ಯಮಂತ್ರಿ ದೇವರಾಜ್ ಅರಸು ಅವರ ಕ್ಯಾಬಿನೆಟ್‌ನಲ್ಲಿ ಭೂ ಸುಧಾರಣಾ ಮತ್ತು ಶಿಕ್ಷಣ, ಕಂದಾಯ, ವಾರ್ತಾ ಮತ್ತು ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಆರಂಭದಲ್ಲಿ ಜನತಾ ಪಕ್ಷದಲ್ಲಿದ್ದ ಸುಬ್ಬಯ್ಯ ಶೆಟ್ಟಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು 1972 ಹಾಗೂ 1978ರಲ್ಲಿ ಸುರತ್ಕಲ್‌ನಿಂದ ಶಾಸಕರಾಗಿ, ಸಚಿವರೂ ಆಗಿದ್ದರು.ಜಾತ್ಯತೀತರಾಗಿದ್ದ ಸುಬ್ಬಯ್ಯ ಶೆಟ್ಟಿ ನೇರ ನಡೆ- ನುಡಿಗೆ ಹೆಸರುವಾಸಿಯಾಗಿದ್ದರು. ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅವರ ಶ್ರಮ ಹಿರಿದು. ಅವರ ಪ್ರಯತ್ನದಿಂದ ಲಕ್ಷಾಂತರ ಗೇಣಿದಾರರು ಭೂ ಮಾಲೀಕರಾಗಿದ್ದರು. 1980- 90ರ ದಶಕದ ಬಳಿಕ ಬದಲಾದ ರಾಜಕೀಯ ವಾತಾವರಣದಲ್ಲಿ ಸುಬ್ಬಯ್ಯ ಶೆಟ್ಟಿ ತೆರೆಮರೆಗೆ ಸರಿದರು. ಭೂಸುಧಾರಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಪಾರವಾಗಿ ಶ್ರಮ ವಹಿಸಿದ್ದ ಸುಬ್ಬಯ್ಯ ಶೆಟ್ಟಿ ಅವರಿಗೆ 2014ನೇ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿ ಲಭಿಸಿತ್ತು. ಶಾಂತವೇರಿ ಗೋಪಾಲ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಸಂತಾಪ: ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಹರೀಶ್ ಕುಮಾರ್, ಶಕುಂತಳಾ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.