ರಾಜ್ಯದ ಕೈ ಗ್ಯಾರಂಟಿಗಳಿಗೆ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿದೆ

| Published : Apr 12 2024, 01:13 AM IST / Updated: Apr 12 2024, 11:05 AM IST

ಸಾರಾಂಶ

ಹತ್ತು ಕೆಜಿ ಅಕ್ಕಿ ಕೊಡುತ್ತೆನೆಂದು ಹೇಳಿ ಕೇಂದ್ರ ಸರ್ಕಾರದ ಐದು ಕೆ.ಜಿ ಅಕ್ಕಿಯನ್ನು ತಾವು ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ ಎಂದು ಲೇವಡಿ

 ಎಚ್.ಡಿ. ಕೋಟೆ ;  ನಮ್ಮ ಮುಂದಿರುವುದು ದೇಶದ ಚುನಾವಣೆ, ಯಾವುದೋ ಪಂಚಾಯಿತಿ ಚುನಾವಣೆಯಲ್ಲ, ಐದು ಗ್ಯಾರಂಟಿಗಳನ್ನು‌ ರಾಜ್ಯ ಸರ್ಕಾರ ನೀಡುತ್ತಿದ್ದೇವೆ ಎನ್ನುತ್ತಾರೆ, ಆದರೆ ಕೇಂದ್ರ ಸರ್ಕಾರವೇ ಅನುದಾನವನ್ನು ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.

ಪಟ್ಟಣದ ಕನಕ‌ಭವನದಲ್ಲಿ ಗುರುವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ‌ಮತ್ತು ಜಾತ್ಯತೀತ ಜನತಾದಳದ ವತಿಯಿಂದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತು ಕೆಜಿ ಅಕ್ಕಿ ಕೊಡುತ್ತೆನೆಂದು ಹೇಳಿ ಕೇಂದ್ರ ಸರ್ಕಾರದ ಐದು ಕೆ.ಜಿ ಅಕ್ಕಿಯನ್ನು ತಾವು ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಶಾಸಕ ಜಿ.ಟಿ. ದೇವೆಗೌಡ ಮಾತನಾಡಿ, ದೇಶ ಉಳಿಯಬೇಕಾದರೆ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು, ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ 92 ವರ್ಷದ ಎಚ್.ಡಿ. ದೇವೇಗೌಡ ಅವರು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಎಲ್ಲರಿಗೂ ಸಮಾನತೆಯ ಹಕ್ಕನ್ನು‌ನೀಡಬೇಕೆಂದು ಗಿರಿಜನ ಮಹಿಳೆಯನ್ನು ರಾಷ್ಟ್ರಪತಿ‌ ಮಾಡಿದ್ದಾರೆ. ಅಲ್ಲದೇ ದಲಿತರನ್ನು ರಾಷ್ಟ್ರಪತಿ ಮಾಡಲಾಗಿತ್ತು ಎಂದರು.

ಸಂವಿಧಾನವನ್ನು ಬಿಜೆಪಿ ಬದಲಿಸುತ್ತದೆ ಎಂದು ಎದುರಾಳಿ ಪಕ್ಷವು ಹೇಳುತ್ತಿದೆ, ಆದರೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಹಲವಾರು ಬಾರಿ ಬದಲಾಯಿಸಿದೆ, ಇದನ್ನು‌ ಮರೆಮಾಚಿ ಬಿಜೆಪಿ ಮೈತ್ರಿಯನ್ನು ದೂರುತ್ತಿದ್ದಾರೆ ಎಂದರು.

ದೇಶದಲ್ಲಿ ‌ಪ್ರಧಾನಿಯಾಗುವ ಅಭ್ಯರ್ಥಿ ಒಬ್ಬರೇ ಇರುವುದು, ಅದುವೇ ನಮ್ಮ ನರೇಂದ್ರ ಮೋದಿ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಲಿಂದ ನೀರು ಸಿಕ್ತಿಲ್ಲ, ಬರಗಾಲ ಬಂದು ಆವರಿಸಿದೆ, ವಿದ್ಯಾರ್ಥಿಗಳು ಓಡಾಡಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಇಂತಹ ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸಬೇಕು ಎಂದರು.

ಭಾರತದಲ್ಲಿರುವ ಮುಸ್ಲಿಂ ಸಮುದಾಯದವರು ಬೇರೆ ದೇಶಗಳಿಗಿಂತ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ, ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲೂ ಸಹ ಮುಸ್ಲಿಂ ಸಮುದಾಯದವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ, ಭಾರತದ ಈ ಪರಿಸ್ಥಿತಿಗೆ ಮೋದಿ ಅವರ ಅಭಯವೇ ಕಾರಣ ಎಂದರು.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಒಟ್ಟು 97 ಸಾವಿರ ಮತಗಳನ್ನು ಪಡೆದಿದ್ದರು, ಈ ಬಾರಿ ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆಯಲಿದ್ದು, ಇತಿಹಾಸ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಜಯಪ್ರಕಾಶ್, ಗುರುಸ್ವಾಮಿ, ನರಸಿಂಹಸ್ವಾಮಿ, ರಾಜೇಂದ್ರ, ಗೋಪಾಲಸ್ವಾಮಿ, ಮೊತ್ತ ಬಸವರಾಜು, ನರಸಿಂಹೇಗೌಡ, ಕೆ.ಎಂ. ಕೃಷ್ಣನಾಯಕ, ಚಿಕ್ಕಣ್ಣ, ರಮೇಶ್ ಕುಮಾರ್, ಟಿ. ವೆಂಕಟೇಶ್, ದೊಡ್ಡನಾಯಕ, ಕೃಷ್ಣಸ್ವಾಮಿ, ಯು.ಟಿ. ಮಹೇಶ್, ಸಿ.ಕೆ. ಗಿರೀಶ್, ವೆಂಕಟಸ್ವಾಮಿ, ಎಚ್.ಸಿ. ಶಿವಣ್ಣ, ಮನುಗನಹಳ್ಳಿ ಮಂಜು, ಲಕ್ಷ್ಮಣ್, ನಾರಾಯಣ್, ಹಂಚೀಪುರ ಗುರುಸ್ವಾಮಿ, ಮಾದಾಪುರ ನಂದೀಶ್, ಎಂ.ಡಿ. ಮಂಚಯ್ಯ ಇದ್ದರು.