ಕಾಂಗ್ರೆಸ್ ಕಿತ್ತೊಗೆಯುವವರೆಗೂ ಮೈತ್ರಿ ಅಬಾಧಿತ

| Published : Apr 03 2024, 01:30 AM IST

ಸಾರಾಂಶ

ದೇಶದ ಉದ್ದಾರ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದ ಉಳಿವಿಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸಬೇಕು, ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನವರು ಮಂಕು ಬೂದಿ ಎರಚುವ ಕೆಲಸ ಮಾಡಲಿದ್ದು, ಇದಕ್ಕೆ ಯಾರು ಸೊಪ್ಪು ಹಾಕಬಾರದು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರಾಜ್ಯದಲ್ಲಿ ಕಾಂಗ್ರೆಸನ್ನು ಬುಡ ಸಮೇತ ಕಿತ್ತೊಗೆಯುವವರೆಗೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಬಾಧಿತವಾಗಿ ಇರುತ್ತದೆ ಎಂದು ಮಾಜಿ ಶಾಸಕ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಚುನಾಯಿತರಾದರೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಬಡವರು ಮತ್ತು ರೈತರ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾರೆ ಎಂದರು.

ದೇಶದ ಉದ್ದಾರ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದ ಉಳಿವಿಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸಬೇಕು, ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನವರು ಮಂಕು ಬೂದಿ ಎರಚುವ ಕೆಲಸ ಮಾಡಲಿದ್ದು, ಇದಕ್ಕೆ ಯಾರು ಸೊಪ್ಪು ಹಾಕಬಾರದು ಎಂದು ತಿಳಿಸಿದರು.

ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡರ ಕುಟುಂಬ ನೀರಾವರಿ ಸೇರಿದಂತೆ ಇತರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪಕ್ಷಾತೀತ ಮತ್ತು ಜಾತ್ಯತೀಯವಾಗಿ ಹೋರಾಟ ಮಾಡಿದ್ದು, ಇದನ್ನು ಅರಿತು ಎಲ್ಲರೂ ಮತ ನೀಡಬೇಕೆಂದರಲ್ಲದೆ, ಈ ವಿಚಾರವನ್ನು ಎರಡು ಪಕ್ಷಗಳ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಬೇಕು ಎಂದರು.

ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂದು ಗುಲ್ಲು ಹಬ್ಬಿಸುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ, ವಾಸ್ತವವಾಗಿ ಕಾಲಾನುಕಾಲಕ್ಕೆ ಕೆಲವು ಬದಲಾವಣೆ ಮಾಡುವುದು ಸಹಜ ಪ್ರಕ್ರಿಯೆ ಎಂದವರು ನುಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ, ಹಾಗಾಗಿ ಈ ತಪ್ಪನ್ನು ನಾವು ಭವಿಷ್ಯದಲ್ಲಿ ಪುನರಾವರ್ತನೆ ಮಾಡುವುದಿಲ್ಲ ಎಂದು ಘೋಷಿಸಿದ ಅವರು, ಎರಡು ಪಕ್ಷಗಳ ಹೋರಾಟ ಜನಪರ ಮತ್ತು ನಿರಂತರವಾಗಿ ಇರುತ್ತದೆ ಎಂದರು.

ನಾನು ರಾಜಕೀಯ ಉತ್ತಮ ಸ್ಥಾನಕ್ಕೆ ಏರಲು ಬಿಜೆಪಿ ಚಿಮ್ಮು ಹಲಗೆಯಾಗಿದ್ದು, ಆ ನಂತರ ಜೆಡಿಎಸ್ ಮೂಲಕ ರಾಜಕೀಯ ಅಧಿಕಾರ ಪಡೆದಿದ್ದು, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರಲ್ಲದೆ, ಕಾರ್ಯಕರ್ತರ ಹಿತಕಾಯಲು ಸದಾ ಬದ್ದನಾಗಿದ್ದು, ನಿಮ್ಮೊಂದಿಗೆ ಸಹೋದರನಾಗಿ ಇರುತ್ತೇನೆ ಎಂದು ಘೋಷಿಸಿದರು.

ಏ. 4ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರಲ್ಲದೆ, ಮಾಜಿ ಮುಖ್ಯಮಂತ್ರಿಗಳ ಗೆಲುವಿಗೆ ಅಹನರ್ಶಿನಿ ದುಡಿಯಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ. ಕುಮಾರ್, ಸಾಲಿಗ್ರಾಮ ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ. ಮಧುಚಂದ್ರ, ದಲಿತ ಮುಖಂಡ ಹನಸೋಗೆ ನಾಗರಾಜು, ಕೆ.ಆರ್. ನಗರ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮ ಮಾತನಾಡಿದರು.

ಪುರಸಭೆ ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ಸಂತೋಷ್ ಗೌಡ, ತೋಂಟದಾರ್ಯ, ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ್ ಜೈನ್, ಜಿಲ್ಲಾ ಯುವ ಜೆಡಿಎಸ್ ಮುಖಂಡ ಹಳಿಯೂರು ಎಚ್.ಕೆ. ಮಧುಚಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಪಿಎಲ್ಡಿ ಬ್ಯಾಂಕ್ ಸದಸ್ಯ ಎಂ.ಎಸ್. ಹರಿಚಿದಂಬರ, ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್, ತಾಪಂ ಮಾಜಿ ಸದಸ್ಯರಾದ ಎಂ. ತಮ್ಮಣ್ಣ, ತಂದ್ರೆರವಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಾಲೂಕು ಅಧ್ಯಕ್ಷರಾದ ಎಚ್.ಸಿ.ಕುಮಾರ್, ರಾಜಣ್ಣ ಇದ್ದರು.