ಕಳೆದ 15 ವರ್ಷಗಳ ಹಿಂದೆ ತಾಲೂಕಿನಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಕೋರಿ ಬಗರ್ ಹುಕುಂ ಸಾಗುವಳಿ ಸಮಿತಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಅಂದಿನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ತಂಡ ರಚಿಸಿ ಸಮಗ್ರ ತನಿಖೆ ನಡೆಸಲಾಗಿತ್ತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ನಿಯಮಾವಳಿ ಉಲ್ಲಂಘಿಸಿರುವ ಅರ್ಜಿಗಳಿಗೂ ಬಗರ್ ಹುಕುಂ ಸಾಗುವಳಿ ಸಮಿತಿಯಲ್ಲಿ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿತ್ತು. ಇದರ ಅರಿವಿಲ್ಲದ ಸ್ವ-ಘೋಷಿತ ಮಾಜಿ ಶಾಸಕ ಬಹಳ ಓದಿ ಬುದ್ಧಿವಂತನೆಂದು ಹೇಳಿಕೊಳ್ಳುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಸುರೇಶ್‌ಗೌಡರನ್ನು ಏಕವಚನದಲ್ಲಿಯೇ ಜರಿದರು.ಪುರಸಭೆ ವ್ಯಾಪ್ತಿಯ ಉಪ್ಪಾರಹಳ್ಳಿಯಲ್ಲಿ 20 ಲಕ್ಷ ರು. ವೆಚ್ಚದ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ನೆಲಹಾಸು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ತಾಲೂಕಿನಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಕೋರಿ ಬಗರ್ ಹುಕುಂ ಸಾಗುವಳಿ ಸಮಿತಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಅಂದಿನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ತಂಡ ರಚಿಸಿ ಸಮಗ್ರ ತನಿಖೆ ನಡೆಸಲಾಗಿತ್ತು ಎಂದರು.
ಜಮೀನು ಮಂಜೂರು ಮಾಡುವ ವೇಳೆ ಅರ್ಜಿ ಸಲ್ಲಿಸಿದ ಕೆಲ ರೈತರ ಹೆಸರನ್ನು ಬದಲಿಸಿರುವುದು, ಐದು ಎಕರೆಗೂ ಹೆಚ್ಚು ಜಮೀನು ಹೊಂದಿರುವ ವ್ಯಕ್ತಿಗಳಿಗೂ ಜಮೀನು ಮಂಜೂರು ಮಾಡಿರುವುದು, ಅರ್ಜಿಯನ್ನೇ ಸಲ್ಲಿಸದ ಕೆಲ ವ್ಯಕ್ತಿಗಳಿಗೂ ಭೂಮಿ ಮಂಜೂರು ಮಾಡಿರುವುದು ಕಂಡುಬಂದಿದೆ ಎಂದರು.ಕಾನೂನಿನಲ್ಲಿ ಒಂದು ಬಾರಿ ಸರ್ಕಾರಿ ಜಮೀನು ಮಂಜೂರಾದ ಬಳಿಕ ನಿಯಮಾವಳಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ವಜಾಗೊಳಿಸಬಹುದು. ಆದರೆ, ಕೆಲಸದ ಒತ್ತಡದಲ್ಲಿ ವಿಚಾರಣೆ ನಡೆಸಿ ನಿಯಮಾವಳಿ ಉಲ್ಲಂಘಿಸಿರುವ ಅರ್ಜಿ ವಜಾಗೊಳಿಸಲು ಎಸಿ ವಿಳಂಬ ಮಾಡಿದ್ದರು ಎಂದರು.
ಕೆಲ ದಿನಗಳ ಹಿಂದೆ ಉಪಲೋಕಾಯುಕ್ತರು ತಾಲೂಕಿಗೆ ಭೇಟಿ ನೀಡಿದ್ದ ವೇಳೆ ಎಚ್ಚರಿಕೆ ಕೊಟ್ಟ ನಂತರ 690 ಪ್ರಕರಣಗಳ ಪೈಕಿ 90 ಪ್ರಕರಣಗಳ ವಿಚಾರಣೆ ನಡೆಸಿ 35 ಪ್ರಕರಣ ವಜಾಗೊಳಿಸಿ ಇನ್ನುಳಿದ ಪ್ರಕರಣಗಳನ್ನು ಬಗರ್‌ಹುಕುಂ ಸಾಗುವಳಿ ಸಮಿತಿಗೆ ಹಸ್ತಾಂತರಿಸಿದ್ದಾರೆ. ಈಗಿನ ಕಾನೂನು ಪ್ರಕಾರ ನಿಯಮಾವಳಿ ಉಲ್ಲಂಘಿಸಿರುವ ಅರ್ಜಿ ಸಮಿತಿಯಲ್ಲೂ ಪರಿಗಣಿಸಲು ಸಾಧ್ಯವಿಲ್ಲ ಎಂದರು.ಮಾತು ಕಲಿತಿರುವ ಒಬ್ಬ ಸ್ವಯಂ ಘೋಷಿತ ಮಾಜಿ ಶಾಸಕ ನಾನು ಬಹಳ ಓದಿದ್ದೇನೆ. ಬುದ್ಧಿವಂತ ಎಂದು ಹೇಳಿಕೊಳ್ಳುತ್ತಾನೆ. ವಿದ್ಯೆ ಇದ್ದಾಕ್ಷಣ ಏನು ಬೇಕಾದರೂ ಮಾಡೋಕೆ ಆಗಲ್ಲ. ನಾನು ಆ ರೀತಿ ಮಾತಾಡಲ್ಲ. ಅದರ ಅಗತ್ಯವೂ ನನಗಿಲ್ಲ. ಅಭಿವೃದ್ಧಿಪಡಿಬೇಕಾದ ಬಹಳಷ್ಟು ಕೆಲಸಗಳು ನನ್ನ ಮುಂದಿವೆ ಎಂದು ಹೇಸರೇಳದೆ ಸುರೇಶ್‌ಗೌಡರನ್ನು ಏಕ ವಚನದಲ್ಲಿಯೇ ಜರಿದರು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಅರ್ಜಿದಾರರಿಂದ ಹಣ ಪಡೆದಿದ್ದಾರೋ, ಪುಕ್ಕಟ್ಟೆ ಮಾಡಿಕೊಟ್ಟಿದ್ದಾರೋ ಅಥವಾ ಏನೆಲ್ಲಾ ವ್ಯವಹಾರ ನಡೆದಿದೆಯೋ ನನಗಂತೂ ಗೊತ್ತಿಲ್ಲ. ಆದರೆ, ಕಾನೂನು ಬಾಹಿರವಾಗಿ 690 ಪ್ರಕರಣಗಳಲ್ಲಿ ಮಾಡಿರುವುದು ಮಾತ್ರ ಅಕ್ಷಮ್ಯ ಅಪರಾಧ ಎಂದರು.ನಂತರ ಮುದ್ದೇಗೌಡನಕೊಪ್ಪಲು ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ 1 ಕೋಟಿ ರು. ವೆಚ್ಚದ ಬಹುಪಯೋಗಿ ಭವನದ ಕಟ್ಟಡ ನಿರ್ಮಾಣ ಹಾಗೂ ಪಡುವಲಪಟ್ಟಣ ಗ್ರಾಮದಲ್ಲಿ 8 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಸತೀಶ್, ಇಎಚ್‌ಒ ಡಾ.ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಮಕ್ಬೂಲ್, ಅನ್ಸರ್ ಪಾಷ, ಸಾದಿಕ್ ಪಾಷ, ಇಷಾದ್ ಪಾಷ, ಸೇರಿದಂತೆ ಹಲವರು ಇದ್ದರು.