ಮಾಜಿ ಶಾಸಕಿ ತೇಜಸ್ವಿನಿ ಗೌಡ ಕಾಂಗ್ರೆಸ್‌ಗೆ ಸೇರ್ಪಡೆ

| Published : Mar 31 2024, 02:00 AM IST / Updated: Mar 31 2024, 08:41 AM IST

ಮಾಜಿ ಶಾಸಕಿ ತೇಜಸ್ವಿನಿ ಗೌಡ ಕಾಂಗ್ರೆಸ್‌ಗೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಶಾಸಕಿ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಶನಿವಾರ ಜೈರಾಂ ರಮೇಶ್ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

 ದೆಹಲಿ :  ಮಾಜಿ ಶಾಸಕಿ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಜೈರಾಂ ರಮೇಶ್ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೆ ಪ್ರಜಾಸತ್ತಾತ್ಮಕ, ಸ್ಥಳೀಯ ನಾಯಕತ್ವ, ಮಾಸ್ ಲೀಡರ್‌ಶಿಪ್‌ನಲ್ಲಿ ನಂಬಿಕೆ ಇಲ್ಲ. ಕೇವಲ ಮೋದಿಯವರ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆಯಿದೆ. ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು ಎನ್ನುವ ಭ್ರಮೆಯಲ್ಲಿ ಬಿಜೆಪಿ ತೇಲುತ್ತಿದೆ ಎಂದು ಟೀಕಿಸಿದರು.

ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ನೀಡದಿದ್ದರೆ ಮೈಸೂರಿನಿಂದ ನನಗೆ ಟಿಕೆಟ್‌ ಕೊಡಿ ಎಂದಿದ್ದೆ. ಬೆಂಗಳೂರು ಉತ್ತರದಿಂದಲಾದರೂ ಟಿಕೆಟ್ ಕೊಡಿ ಎಂದಿದ್ದೆ, ಕೊಡಲಿಲ್ಲ ಎಂದರು.

ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿಗೆ ತಾಕತ್ತು ಇದ್ದಿದ್ದರೆ ಜೆಡಿಎಸ್ ಜೊತೆ ಹೋಗುವ ಅನಿವಾರ್ಯತೆ ಏಕೆ ಬರುತ್ತಿತ್ತು?. ಆದರೆ, ಒಕ್ಕಲಿಗರ ಹಿತ ಕಾಪಾಡುವಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ಸಮರ್ಥರಾಗಿದ್ದಾರೆ. ಈ ಹಿಂದೆ ಡಿಕೆಶಿ ಮತ್ತು ನನಗೆ ಇದ್ದಿದ್ದು‌ ಕೇವಲ ವಿಷಯಾಧಾರಿತ ಭಿನ್ನಾಭಿಪ್ರಾಯ ಮಾತ್ರ. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ನಾವು ಗೆಲ್ಲಿಸಲೇ ಬೇಕು. ಅವರ ಪರ ಪ್ರಚಾರ ಮಾಡ್ತಿನಿ ಎಂದರು.

ಕಾಂಗ್ರೆಸ್ ಸೇರ್ಪಡೆ ಖಚಿತ ಪಡಿಸಿದ ನಿಶಾ ಯೋಗೇಶ್ವರ್

ರಾಮನಗರ: ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಜೆಪಿ ನಾಯಕರಾದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಯೋಗೇಶ್ವರ್ ಸದ್ಯದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೆಲ ತಿಂಗಳ ಹಿಂದಷ್ಟೇ ನಿಶಾ ಭೇಟಿ ಮಾಡಿದ್ದರು. ಬಳಿಕ ಬಿಎಂಐಸಿಪಿ ಅಧ್ಯಕ್ಷರಾಗಿ ಚನ್ನಪಟ್ಟಣ ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಅಧಿಕಾರ ಸ್ವೀಕಾರ ಸಮಯದಲ್ಲಿ ಸಹ ಸಂಸದ ಡಿ.ಕೆ.ಸುರೇಶ್ ಜೊತೆಗೆ ನಿಶಾ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಶಾ, ಸೇರ್ಪಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದಕ್ಕೆ ನನ್ನ ತಂದೆಯ ಸಹಮತವಿದೆ. ಅವರಿಗೆ ಗೊತ್ತಿದ್ದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ಸೇರುವ ಸ್ವಾತಂತ್ರ್ಯ ನನಗೆ ಕೊಟ್ಟಿದ್ದಾರೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಗೊತ್ತಿಲ್ಲ ಎಂದರು.

ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದಕ್ಕೆ ನನ್ನ ತಂದೆಯ ಸಹಮತವಿದೆ. ಅವರಿಗೆ ಗೊತ್ತಿದ್ದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ಸೇರುವ ಸ್ವಾತಂತ್ರ್ಯ ನನಗೆ ಕೊಟ್ಟಿದ್ದಾರೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನ್ನ ತಂದೆಯವರು ಸ್ವತಂತ್ರವಾಗಿ ರಾಜಕಾರಣ ಮಾಡಿದವರು. ನನ್ನ ರಾಜಕೀಯ ಬೆಳವಣಿಗೆಗೂ ಅವರು ಅಡ್ಡಿಪಡಿಸುವುದಿಲ್ಲ. ನನಗೆ ಕಾಂಗ್ರೆಸ್ ಸೇರುವುದು ಒಳ್ಳೆಯದು ಅನಿಸುತ್ತಿದೆ. ಅದರಿಂದಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಕಾಂಗ್ರೆಸ್ ಸೇರುತ್ತಿರುವ ಹಿಂದೆ ಚನ್ನಪಟ್ಟಣದ ಅಭಿವೃದ್ಧಿಯೇ ಮುಖ್ಯಕಾರಣ. ಎಲ್ಲರೂ ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ, ಚನ್ನಪಟ್ಟಣದಲ್ಲಿ ಅಭಿವೃದ್ಧಿ ಏನೂ ಆಗಿಲ್ಲ. ಉದ್ಯೋಗ ಸಮಸ್ಯೆ ಸಾಕಷ್ಟಿದೆ. ನಾಲ್ಕೈದು ಕಂಪನಿಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾಂಗ್ರೆಸ್‌ನಿಂದ ಬೆಂಬಲ ಸಿಕ್ಕರೆ, ಟಿಕೆಟ್ ಸಿಕ್ಕರೆ ನಾನು ಕಾಂಗ್ರೆಸ್‌ನಿಂದಲೇ ಸೇವೆ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಯೋಗೇಶ್ವರ್ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆಮಾಡುವ ಸುಳಿವು ನೀಡಿದ್ದಾರೆ. ಚನ್ನಪಟ್ಟಣ ಹಾಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ಚರ್ಚೆ ಆರಂಭಗೊಂಡಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ನಿಶಾಯೋಗೇಶ್ವರ್ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.