ದೇಶಾದ್ಯಂತ ಹಾಸನ ಜಿಲ್ಲೆಯ ಮರ್ಯಾದೆ ಬೀದಿ ಪಾಲಾಗಿದೆ. ಇನ್ನೂ ಜನರು ಆ ಶಾಕ್‌ನಿಂದ ಹೊರಬಂದೆ ಇಲ್ಲ. ಆಗಲೇ ಜೆಡಿಎಸ್ ನವರು ಸಮಾವೇಶ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ರೇವಣ್ಣನವರ ಅಸ್ತಿತ್ವ ಉಳಿಸಲು ಕೇಂದ್ರದಿಂದ ಕುಮಾರಸ್ವಾಮಿರವರು ಹಾಸನ ಜಿಲ್ಲೆಗೆ ಬಂದು ಸಮಾವೇಶದ ಹೆಸರಿನಲ್ಲಿ ತಮ್ಮ ಕುಟುಂಬವನ್ನು ಸರಿಪಡಿಸಲು ಮುಂದಾಗಿದ್ದಾರೆ. ಪ್ರಜ್ವಲ್‌ರವರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಅದನ್ನ ಬಗೆಹರಿಸುವ ಬದಲು ಮಹಿಳೆಯರಿಗೆ ನ್ಯಾಯ ಕೊಡುತ್ತೇವೆ ಎಂಬುದು ಎಷ್ಟರಮಟ್ಟಿಗೆ ಸರಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಈಗಾಗಲೇ ದೇಶಾದ್ಯಂತ ಹಾಸನ ಜಿಲ್ಲೆಯ ಮರ್ಯಾದೆ ಬೀದಿ ಪಾಲಾಗಿದೆ. ಇನ್ನೂ ಜನರು ಆ ಶಾಕ್‌ನಿಂದ ಹೊರಬಂದೆ ಇಲ್ಲ. ಆಗಲೇ ಜೆಡಿಎಸ್ ನವರು ಸಮಾವೇಶ ಮಾಡಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಪ್ರಜ್ವಲ್‌ರವರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಅದನ್ನ ಬಗೆಹರಿಸುವ ಬದಲು ಮಹಿಳೆಯರಿಗೆ ನ್ಯಾಯ ಕೊಡುತ್ತೇವೆ ಎಂಬುದು ಎಷ್ಟರಮಟ್ಟಿಗೆ ಸರಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಆರೋಪಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರ ಇಳಿ ವಯಸ್ಸಿನಲ್ಲಿ ಬೀದಿಗೆ ತಂದು ಭಾಷಣ ಮಾಡಿಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಜೆಡಿಎಸ್ ಪಕ್ಷದವರಿಗೆ ತರವಲ್ಲ. ರೇವಣ್ಣನವರ ಅಸ್ತಿತ್ವ ಉಳಿಸಲು ಕೇಂದ್ರದಿಂದ ಕುಮಾರಸ್ವಾಮಿರವರು ಹಾಸನ ಜಿಲ್ಲೆಗೆ ಬಂದು ಸಮಾವೇಶದ ಹೆಸರಿನಲ್ಲಿ ತಮ್ಮ ಕುಟುಂಬವನ್ನು ಸರಿಪಡಿಸಲು ಮುಂದಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಒಂದು ಸಮಾವೇಶ ಹಾಗೂ ಸರ್ಕಾರದ ವತಿಯಿಂದ ಒಂದು ಸಮಾವೇಶವನ್ನು ನಾವು ಮಾಡಿದ್ದೇವೆ. ಆ ಸಮಾವೇಶ ಕುಟುಂಬಕ್ಕಾಗಿ ಸೀಮಿತವಾಗಿರಲಿಲ್ಲ, ಬಡವರ, ನೊಂದವರ ಶೋಷಿತರ ಪರವಾದಂತಹ ಕಾರ್ಯಕ್ರಮಗಳನ್ನ ನೀಡಿದ್ದೇವೆ, ಜೆಡಿಎಸ್ ರೀತಿ ತಂದೆ ಮಗ ಮೊಮ್ಮಗ ಅಳಿಯಂದಿರಿಗೆ ಸೀಮಿತವಾದ ಪಕ್ಷವಲ್ಲ, ಹಣ ಕೊಟ್ಟು ಸಮಾವೇಶಕ್ಕೆ ಜನರನ್ನ ಕರೆಸುವುದಾದರೆ ಎಷ್ಟು ಜನ ಬೇಕಾದರೂ ಕರೆಸಬಹುದು ಜೆಡಿಎಸ್‌ನವರು ಮಂಡ್ಯ , ಕುಣಿಗಲ್, ತುಮಕೂರು, ಕಡೂರು, ಚಿಕ್ಕಮಗಳೂರು, ಹೀಗೆ ಹೊರ ಜಿಲ್ಲೆಗಳಿಂದ ಜನರನ್ನ ಕರೆಸಿ ಸಮಾವೇಶ ಮಾಡಿದ್ದಾರೆ, ದೇವೇಗೌಡರ ಅಳಿಯ ಎಂಬ ಕಾರಣಕ್ಕೆ ಶಾಸಕ ಸಿ. ಎನ್. ಬಾಲಕೃಷ್ಣರವರಿಗೆ ಸಮಾವೇಶದಲ್ಲಿ ಭಾಷಣಕ್ಕೆ ಆಸ್ಪದ ನೀಡಿದರು. ಆದರೆ ಒಬ್ಬ ಮಾಜಿ ಮಂತ್ರಿ ಹಾಗೂ ಹಿರಿಯ ಶಾಸಕರಾಗಿರುವಂತಹ ಎ. ಮಂಜುರವರನ್ನ ಸೌಜನ್ಯಕ್ಕೂ ವೇದಿಕೆಯಲ್ಲಿ ಕೂರಿಸದೆ ಮಾತನಾಡಲು ಅವಕಾಶ ನೀಡದೆ ಜೆಡಿಎಸ್‌ನವರು ಅವಮಾನ ಮಾಡಿದ್ದಾರೆ. ಶಿವಲಿಂಗೇಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಆರೋಪಿಸುವ ಜೆಡಿಎಸ್‌ನವರು ಎ.ಮಂಜುರವರನ್ನ ಜೆಡಿಎಸ್ ಪಕ್ಷಕ್ಕೆ ಯಾವ ಮಾನದಂಡ ಹಿಡಿದು ಸೇರಿಸಿಕೊಂಡಿದ್ದಾರೆ ಎಂಬುದನ್ನು ಉತ್ತರಿಸಬೇಕು. ಮೊದಲು ನೀವು ಸರಿ ಹೋಗಿ ಆಮೇಲೆ ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇರುತ್ತದೆ ಅದನ್ನ ಬಿಟ್ಟು ಬಾಯಿಗೆ ಬಂದಂತೆ ನಮ್ಮ ನಾಯಕರನ್ನು ಏಕವಚನದಲ್ಲಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಸಮಾವೇಶದಲ್ಲಿ ಸರ್ಕಾರದ ಕೊಡುಗೆಯನ್ನ ಜನರಿಗೆ ತಿಳಿಸಿದ್ದಾರೆ. ನಾನು ಕೂಡ ಯೋಜನೆಗೆ ಶ್ರಮವಹಿಸಿದ್ದು ಅಭಿವೃದ್ಧಿ ವಿಚಾರದಲ್ಲಿ ಗೋಪಾಲಸ್ವಾಮಿ ಅವರ ಮನವಿ ಮೇರೆಗೆ ಕೆಲಸ ಮಾಡಲಾಗಿದೆ ಎಂಬುದನ್ನ ವೇದಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಶಾಸಕರು ನಾನು ಮಾಡಿದ್ದು ಎಂದು ಜನರಿಗೆ ಏಕೆ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ತಿಳಿಸಬೇಕು.ಹಾಸನ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಎಸ್ ಪಟೇಲ್ ಅವರು ಒಂದೂವರೆ ವರ್ಷದಲ್ಲಿ ಎಷ್ಟು ಬಾರಿ ಸಂಸತ್‌ನಲ್ಲಿ ಮಾತನಾಡಿದ್ದಾರೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸಚಿವರನ್ನ ಭೇಟಿ ಮಾಡಿದ್ದಾರೆ ಎಂಬುದು ಈ ಜಿಲ್ಲೆಯ ಜನರಿಗೆ ಗೊತ್ತು ಆದರೆ ಈ ಹಿಂದೆ ಇದ್ದ ದೇವೇಗೌಡರ ಮೊಮ್ಮಗ ಪ್ರಜ್ವಲ್ ಎಷ್ಟು ಬಾರಿ ಸಂಸತ್‌ನಲ್ಲಿ ಭಾಗವಹಿಸಿದ್ದಾರೆ ಮಾತನಾಡಿದ್ದಾರೆ ಎಂಬುದನ್ನ ಹೇಳಲಿ. ಜನರು ದಡ್ಡರಲ್ಲ ಎಲ್ಲವನ್ನ ಗಮನಿಸುತ್ತಿರುತ್ತಾರೆ. ಮೊದಲು ಅವರ ಕುಟುಂಬಕ್ಕೆ ಬುದ್ಧಿವಾದ ಹೇಳಲಿ ನಂತರ ರಾಜಕೀಯ ಮಾಡಲಿ ಎಂದರು.ಜಿಲ್ಲಾ ಉಸ್ತುವಾರಿ ಕೃಷ್ಣ ಬೈರೇಗೌಡರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಅವರು ರೈತರ ಪರ ಕೆಲಸ ಮಾಡುವ ಪ್ರಾಮಾಣಿಕ ರಾಜಕಾರಣಿ. ಅದನ್ನ ಜಿಲ್ಲೆಯ ಜನರು ಕೂಡ ಒಪ್ಪಿಕೊಂಡಿದ್ದಾರೆ. ಪಹಣಿ ಓಡೋ ಹಾಗೂ ಕಂದಾಯ ಇಲಾಖೆಯಲ್ಲಿ ಇದ್ದಂತಹ ಬಹುತೇಕ ಸಮಸ್ಯೆಗಳನ್ನ ನಿವಾರಿಸಲು ಮುಂದಾಗಿರುವ ಸಚಿವರನ್ನ ಟೀಕಿಸುವುದು ಎಷ್ಟರಮಟ್ಟಿಗೆ ಸರಿ? ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಪ್ರಾಮಾಣಿಕವಾಗಿ ತಲುಪುತ್ತಿದೆ. ಆದರೆ ಅದನ್ನ ಸಹಿಸಿಕೊಳ್ಳದ ಜೆಡಿಎಸ್‌ನವರು ಗ್ಯಾರಂಟಿ ಯೋಜನೆ ಸರಿ ಇಲ್ಲ ಎಂದು ಹೇಳುವುದು ತಪ್ಪು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರಿಗೆ ಮತದಾರರೇ ಸರಿಯಾದ ಉತ್ತರ ನೀಡಲಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದು ಕಾಂಗ್ರೆಸ್ ಪಕ್ಷದಿಂದ ಕುಮಾರಸ್ವಾಮಿ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಬೆಂಬಲದಿಂದ ಅದನ್ನ ಮರೆತು ಕಾಂಗ್ರೆಸ್ ಪಕ್ಷವನ್ನ ಟೀಕಿಸುವುದು ತರವಲ್ಲ ಎಂದು ಹೇಳಿದರು.