ಸಾರಾಂಶ
ಉಸಿರಾಟದ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು
ಕನ್ನಡಪ್ರಭ ವಾರ್ತೆ ಶಿರಾಚಿತ್ರದುರ್ಗ ಕ್ಷೇತ್ರದ ಮಾಜಿ ಸಂಸದರು ಹಾಗೂ ಶಿರಾ ಕ್ಷೇತ್ರದ ಮಾಜಿ ಶಾಸಕರಾದ ಸಿ.ಪಿ.ಮೂಡಲಗಿರಿಯಪ್ಪ ಅವರಿಗೆ ಉಸಿರಾಟದ ತೀವ್ರ ಸಮಸ್ಯೆ ಉಂಟಾಗಿ ಅಸ್ವಸ್ಥಗೊಂಡ ಕಾರಣ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
85ವರ್ಷ ವಯಸ್ಸಾಗಿರುವ ಸಿ.ಪಿ.ಮೂಡಲಗಿರಿಯಪ್ಪ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧೆ ಮಾಡಿ ಸತತವಾಗಿ 15 ವರ್ಷಗಳ ಕಾಲ ಸಂಸದರಾಗಿದ್ದರು. ಅಲ್ಲದೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಶಾಸಕರು ಕೂಡ ಆಗಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿರವರ ಕುಟುಂಬದೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು.ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ಬಿಎ ಎಲ್‌ಎಲ್ ಬಿ ಪದವಿ ಪಡೆದು ವಕೀಲ ವೃತ್ತಿಯೊಂದಿಗೆ ರಾಜಕೀಯ ಪ್ರವೇಶ ಮಾಡಿದವರು. ಸಿಪಿ ಮೂಡಲಗಿರಿಯಪ್ಪನವರ ಅಣ್ಣ ಮೂಡ್ಲೆಗೌಡ ಮತ್ತು ಪುತ್ರ ಮಾಜಿ ಶಾಸಕ ರಾಜೇಶ್ ಗೌಡ ಕೂಡ ಶಿರಾ ಕ್ಷೇತ್ರದ ಶಾಸಕರಾಗಿ ಸೇವೆ ಮಾಡಿದ್ದಾರೆ.
ಟಿ.ಬಿ.ಜಯಚಂದ್ರ ಭೇಟಿ:ಸಿ.ಪಿ.ಮೂಡಲಗಿರಿಯಪ್ಪ ಅವರ ಆರೋಗ್ಯ ಏರುಪೇರಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದ ತಕ್ಷಣ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರೊಂದಿಗೆ ಚರ್ಚೆ ನಡೆಸಿದರು.