ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ರೈತರ ಹಾಗೂ ಸರ್ಕಾರದ ಜಾಗಗಳನ್ನು ವಕ್ಫ್ ಬೋರ್ಡ್‌ಗೆ ಸೇರ್ಪಡೆ ಮಾಡಲು ಅವಕಾಶ ನೀಡುವುದಿಲ್ಲ. ಇದರ ವಿರುದ್ದ ಶೀಘ್ರದಲ್ಲೇ ಜಿಲ್ಲಾ ಆಡಳಿತ ಕಚೇರಿಯ ಮುಂದೆ ಅಹೋರಾತ್ರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದ ನಂತರ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹಾಗೂ ಒಂದು ಸಮುದಾಯದವರನ್ನು ತುಷ್ಠೀಕರಣಗೊಳಿಸಲು ಕಾನೂನು ಬಾಹಿರವಾಗಿ ಸಂವಿಧಾನದ ವಿರುದ್ಧವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಹಲವಾರು ಅಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಜಮೀರ್ ಪಾಷ ಅಕ್ರಮವಾಗಿ ಸರ್ಕಾರದ ಜಾಗಗಳನ್ನು ವಕ್ಫ್ ಬೋರ್ಡ್‌ಗೆ ಸೇರ್ಪಡೆ ಮಾಡಿ ನಿವೃತ್ತಿ ನಂತರ ಕೋಲಾರದಲ್ಲಿ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸಿ ಎಷ್ಟೇ ಹಣ ಖರ್ಚು ಮಾಡಿದರೂ ಸಹ ಜನಾದೇಶ ಸಿಗದೆ ಸೋತು ಸುಣ್ಣವಾಗಿ ಮಣ್ಣಾಗಿಯೂ ಹೋದರು. ಅವರ ನಂತರ ಅಕ್ರಂಪಾಷರ ಸರದಿಯಾಗಿದೆ. ಇವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಕರೆತಂದಿದ್ದಾರೆ ಎಂದರು.ಈ ಹಿಂದೆ ನಸೀರ್ ಅಹ್ಮದ್ ಹಲವಾರು ಭಾರಿ ಚುನಾವಣೆಗೆ ಸ್ಪರ್ಧಿಸಿದರೂ ಪ್ರಯೋಜನವಾಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸಮುದಾಯದವರನ್ನು ತುಷ್ಟೀಕರಣಗೊಳಿಸಲು ವಕ್ಫ್ ಬೋರ್ಡ್‌ಗೆ ಒಂದು ತಾಲ್ಲೂಕಿನಲ್ಲೇ ರೈತರ ಜಮೀನು 218 ಎಕರೆ ಅಕ್ರಮವಾಗಿ ಸೇರ್ಪಡೆ ಮಾಡಿದ್ದಾರೆ. ಇದೇ ರೀತಿ ಹಲವಾರು ಅಕ್ರಮಗಳಲ್ಲಿ ತೊಡಗಿಸಿಕೊಂಡು ಮುಸ್ಲಿಂ ಸಮುದಾಯದವರ ವೋಟ್ ಬ್ಯಾಂಕ್ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.ಮುಸ್ಲಿಂ ಸಮುದಾಯದವರಿಗೆ ರೈತರ ಪಿತೃರ್ಜಿತ ಆಸ್ತಿಗಳು, ಸರ್ಕಾರಿ ಶಾಲೆಗಳು, ಸ್ಮಶಾನಗಳು, ಆಟದ ಮೈದಾನಗಳು, ದೇವಾಲಯ ಜಾಗಗಳು ಸೇರಿದಂತೆ ಅಕ್ರಮವಾಗಿ ಫಹಣಿಗಳನ್ನು ಮಾಡಲಾಗಿದೆ. ಆದರೆ ಸರ್ಕಾರಿ ಶಾಲೆಗೆ, ಅಂಗನವಾಡಿಗಳಿಗೆ, ಆಟದ ಮೈದಾನಕ್ಕೆ, ಸಮುದಾಯ ಭವನಗಳಿಗೆ, ಅನಾಥ ಆಶ್ರಮಕ್ಕೆ, ವೃದ್ದಾಶ್ರಮಕ್ಕೆ ಜಾಗವನ್ನು ಮಂಜೂರು ಮಾಡಲು ಹಲವಾರು ಅರ್ಜಿಗಳು ಸಲ್ಲಿಸಿದರು ಮಂಜೂರು ಮಾಡದ ಜಿಲ್ಲಾಡಳಿತ ಒಂದು ಸಮುದಾಯಕ್ಕೆ 218 ಎಕರೆ ಜಾಗ ವಕ್ಫ್ ಬೋರ್ಡ್‌ಗೆ ನೀಡಿದಂತೆ ಎಲ್ಲಾ ಸಮುದಾಯಗಳಿಗೆ ಜಾಗವನ್ನು ಮಂಜೂರು ಮಾಡಬೇಕೆಂದು ಆಗ್ರಹಪಡಿಸಿದರು.ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ವಕ್ಫ್ ಬೋರ್ಡ್ ಬಡವರ, ಸಾರ್ವಜನಿಕರ ಆಸ್ತಿಗಳನ್ನು ಕಬಳಿಸುತ್ತಿದ್ದು, ಈ ಸಂಬಂಧವಾಗಿ ಜಾಗೃತಗೊಳಿಸುವ ದಿಸೆಯಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ರೈತರ ವಿರುದ್ದ, ಬಡವರ ವಿರುದ್ಧ ಒಂದು ಸಮುದಾಯದ ಪರವಾಗಿ ಸರ್ಕಾರವು ಮಾಡುತ್ತಿರುವ ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ವಿಜಯ ಕುಮಾರ್, ಓಂಶಕ್ತಿ ಚಲಪತಿ, ಎಸ್.ಬಿ.ಮುನಿವೆಂಕಟಪ್ಪ, ಸಿ.ಡಿ.ರಾಮಚಂದ್ರ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಓಹೀಲೇಶ್, ಮಂಜುನಾಥ್, ಮಹೇಶ್, ಜೈನ್, ಅಪ್ಪಿನಾರಾಯಣಸ್ವಾಮಿ, ಕಪಾಲಿ ಶಂಕರ್, ಶ್ರೀನಾಥ್. ವೆಂಕಟೇಶ್, ಮಮತಮ್ಮ ಇದ್ದರು.ಫೋಟೋ: ಕೋಲಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಸ್. ,ಮುನಿಸ್ವಾಮಿ ಮಾತನಾಡಿದರು.