ಸಾರಾಂಶ
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಅವರ ಬಂಟ್ವಾಳ ಕಾರಿಂಜದ ನಿವಾಸಕ್ಕೆ ಉತ್ತರ ಮುಂಬೈ ಕ್ಷೇತ್ರದ ಮಾಜಿ ಸಂಸದ ಗೋಪಾಲ ಸಿ.ಶೆಟ್ಟಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಅವರ ಬಂಟ್ವಾಳ ಕಾರಿಂಜದ ನಿವಾಸಕ್ಕೆ ಉತ್ತರ ಮುಂಬೈ ಕ್ಷೇತ್ರದ ಮಾಜಿ ಸಂಸದ ಗೋಪಾಲ ಸಿ.ಶೆಟ್ಟಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ನನಗೆ ಸಂಬಂಧಿಯಾಗಿದ್ದು, ಈ ಅಮಾನವೀಯ ಹತ್ಯೆ ಅತ್ಯಂತ ಖಂಡನೀಯ. ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ನನಗೆ ತೀವ್ರ ಬೇಸರವಾಗುತ್ತದೆ. ರಾಜ್ಯದಲ್ಲಿ ವರ್ಷಕ್ಕೆ ಸಾವಿರಾರು ಕೊಲೆಗಳು ನಡೆಯುತ್ತಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ 100ಕ್ಕೂ ಅಧಿಕ ಕೊಲೆಗಳು ಸಂಭವಿಸುತ್ತಿರುವುದು ನಮ್ಮ ಕರ್ನಾಟಕದ ಸಂಸ್ಕೃತಿಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರವು ಇಂತಹ ಘಟನೆಗಳು ಮರುಕಳಿಸದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉತ್ತರ ಮುಂಬೈ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಉಷಾ ಗೋಪಾಲ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಜ್ಯೋತಿ ಕೆ.ಶೆಟ್ಟಿ, ಉಡುಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಬಿಜೆಪಿ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯ್ಕ್, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ಕಾರ್ಕಳ ಕಾರ್ಯದರ್ಶಿ ಸೂರ್ಯಕಾಂತ್ ಶೆಟ್ಟಿ, ಕಾರ್ಕಳ ಬಂಟರ ಸಂಘದ ಮಾಜಿ ಉಪಾಧ್ಯಕ್ಷ ವಿಜಯ ಶೆಟ್ಟಿ, ಬಿಜೆಪಿ ಮುಖಂಡರಾದ ದೇವೇಂದ್ರ ಶೆಟ್ಟಿ, ಸತೀಶ್ ಪೂಜಾರಿ, ಸುಹಾಸ್ ಶೆಟ್ಟಿ, ರಾಕೇಶ್ ಶೆಟ್ಟಿ, ಪ್ರಸಾದ್, ರವೀಂದ್ರ ಶೆಟ್ಟಿ ಮೂಲಡ್ಕ ಮತ್ತಿತರರು ಉಪಸ್ಥಿತರಿದ್ದರು.