ಸಾರಾಂಶ
ಕೊಪ್ಪಳ: ನ್ಯಾಯಾಲಯಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಕೊಪ್ಪಳ ನಗರಸಭೆಯ ಮಾಜಿ ಸದಸ್ಯೆ ವಿಜಯಾ ಹಿರೇಮಠ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಬಂಧಿಕರ ಮನೆಯಲ್ಲಿ ಬುಧವಾರ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ.
ಕಲಬುರಗಿಯ ಬಸವೇಶ್ವರ ನಗರದ ನಿವಾಸಿ ಹನುಮಂತ ಎಂಬುವವರು ನೀಡಿದ ದೂರಿನನ್ವಯ ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಜೂ. ೩೦ ರಂದು ಸಿದ್ದಲಿಂಗಯ್ಯ ಹಿರೇಮಠ (ಎ-೧), ವಿಜಯಾ ಹಿರೇಮಠ (ಎ-೨), ಲೇವಿನಾ ಮೊಂಟೆರೊ (ಎ-೩), ಜೈಸೈನ ಡಿಸೋಜಾ (ಎ-೪), ರಾಕೇಶ (ಎ-೫), ಮಹೇಂದ್ರ (ಎ-೬) ಎಂಬುವವರ ವಿರುದ್ಧ ದೂರು ದಾಖಲಾಗಿತ್ತು.ಇದಕ್ಕೂ ಮುನ್ನ ೨೦೨೪ರ ಜು.೩೧ರಂದು ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ನಿವಾಸಿ ಅಬ್ದುಲ್ ರಜಾಕ್ ಸಹ ದೂರು ನೀಡಿದ್ದರು.
ಪ್ರಕರಣದ ಎ.1 ಆರೋಪಿ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಬಂಧಿಸಿ, ಕೆಲ ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.ಕಲಬುರಗಿಯ ಹನುಮಂತ ಅವರು ನೀಡಿದ ದೂರಿನಲ್ಲಿ ವಿಜಯಾ ಹಿರೇಮಠ ಅವರನ್ನು ಎರಡನೇ ಆರೋಪಿ ಮಾಡಿದ್ದು, ಅವರನ್ನು ಸಹ ಈಗ ಬಂಧಿಸಲಾಗಿದೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ವಿಜಯನಗರ ಸೇರಿ ಗದಗ ಜಿಲ್ಲೆಯ ಶಿರಹಟ್ಟಿ, ಮುಂಡರಗಿ ತಾಲೂಕಿನ ಹಲವು ಗ್ರಾಮಗಳ ಯುವಕರು ಕೋರ್ಟ್ ನಲ್ಲಿ ಕೆಲಸ ಕೊಡಿಸುತ್ತಾರೆ ಎಂದು ಲಕ್ಷ ಲಕ್ಷ ಲಂಚ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.ಕೊಪ್ಪಳದಲ್ಲಿ ಪ್ರತಿಭಟನೆ : ಲಂಚ ಕೊಟ್ಟಿರುವ ವಿದ್ಯಾರ್ಥಿಗಳು ನಮ್ಮ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ಸಿದ್ದಲಿಂಗಯ್ಯ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ತಕ್ಷಣ ಬಂಧಿಸಿ, ನಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದರಲ್ಲದೆ ಸಿದ್ದಲಿಂಗಯ್ಯ ಅವರ ಮನೆ ಬಾಗಿಲಿಗೆ ಬ್ಯಾನರ್ ಸಹ ಕಟ್ಟಿದ್ದರು.
ಏನಿದು ಪ್ರಕರಣ ?: ರಾಜ್ಯಾದ್ಯಂತ ನ್ಯಾಯಾಲಯದಲ್ಲಿ ಅನೇಕ ಹುದ್ದೆ ಖಾಲಿ ಇದ್ದು, ನ್ಯಾಯಾಧೀಶರೇ ನೇರವಾಗಿ ನೇಮಕ ಮಾಡಿಕೊಳ್ಳುತ್ತಾರೆ. ನನಗೆ ನ್ಯಾಯಾಧೀಶರ ಪರಿಚಯವಿದ್ದು, ನಿಮಗೆ ನೇರವಾಗಿ ನೇಮಕಾತಿ ಪತ್ರ ನೀಡುತ್ತೇನೆ. ನೀವು ನಂತರ ಹೋಗಿ ನೇಮಕಾತಿ ಆದೇಶ ಪ್ರತಿ ನೀಡಿ ನೌಕರಿಗೆ ಹಾಜರಾಗಬಹುದು ಎಂದು ಹೇಳಿ ಇವರು ನಂಬಿಸಿದ್ದರು.ಇದನ್ನು ನಂಬಿದ ಸುಮಾರು 200 ಅಭ್ಯರ್ಥಿಗಳು ತಲಾ ಹತ್ತು ಲಕ್ಷ ರುಪಾಯಿಯಂತೆ ನೀಡಿದ್ದಾರೆ ಎನ್ನಲಾಗುತ್ತಿದೆ.
ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಸಹಿ ಮಾಡಿ ನೇಮಕಾತಿ ಪತ್ರ ನೀಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಸಿದ್ದಲಿಂಗಯ್ಯ ಹಿರೇಮಠ ಅವರು ತಾವು ಈ ಕುರಿತು ವ್ಯವಹರಿಸಿ, ನಂತರ ತಮ್ಮ ಪತ್ನಿ ವಿಜಯಾ ಹಿರೇಮಠ ಅವರನ್ನು ಪರಿಚಯಿಸಿ, ಅವರ ಬಳಿ ಕೆಲವೊಂದು ಹಣ ಕೊಡಿಸಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.