ನಂಜುಂಡಸ್ವಾಮಿ ಸದಸ್ಯತ್ವ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಶೀಘ್ರ ಪತ್ರ

| Published : Jul 26 2025, 12:00 AM IST

ನಂಜುಂಡಸ್ವಾಮಿ ಸದಸ್ಯತ್ವ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಶೀಘ್ರ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ಭೇದ ಮರೆತು ಸದಸ್ಯರು ನಂಜುಂಡಸ್ವಾಮಿ ಸದಸ್ಯತ್ವ ರದ್ದು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪೊಲೀಸ್ ಕಸ್ಟಡಿಯಲ್ಲಿರುವ ಪುರಸಭೆ ಸದಸ್ಯ ಟಿ.ಎಂ. ನಂಜುಂಡಸ್ವಾಮಿ ಸದಸ್ಯತ್ವವನ್ನು ರದ್ದು ಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಶುಕ್ರವಾರ ಪುರಸಭೆ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ವಸಂತ ಬಿ. ಶ್ರೀಕಂಠ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಸಾರ್ವಜನಿಕರಿಂದ ತೆರಿಗೆ ಹಣ ಪಡೆದು ಪುರಸಭೆ ಖಾತೆಗೆ ಜಮೆ ಮಾಡದೆ ಕೆನರಾಬ್ಯಾಂಕಿನನಕಲಿ ಸೀಲನ್ನು ಬಳಸಿ ಲಕ್ಷಾಂತರ ರು. ಗಳ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಂಜುಂಡಸ್ವಾಮಿಯನ್ನು ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದಿದ್ದರು.

ನಂಜುಂಡಸ್ವಾಮಿ ಬಳಿ ಹಣ ನೀಡಿದ್ದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದ ಹಿನ್ನೆಲೆ, ಸಾರ್ವಜನಿಕರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಪುರಸಭೆಯಲ್ಲಿ ಕರೆಯಲಾಗಿದ್ದ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಪಕ್ಷ ಭೇದ ಮರೆತು ಸದಸ್ಯರು ನಂಜುಂಡಸ್ವಾಮಿ ಸದಸ್ಯತ್ವ ರದ್ದು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ಮಾಜಿ ಅಧ್ಯಕ್ಷ ಎಸ್. ಮದನ್ ರಾಜ್ ಮಾತನಾಡಿ, ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಮಾಡಿರುವ ಅವ್ಯವಹಾರಗಳ ತೀವ್ರವಾಗಿ ಕಿಡಿಕಾರಿದರು. ಆರೋಪಿ ಸದಸ್ಯ ಮಾಡಿರುವುದು ಅಕ್ಷಮ್ಯ ಅಪರಾಧ, ಸಾರ್ವಜನಿಕರು ಕಷ್ಟ ಪಟ್ಟ ಹಣವನ್ನು ಲಪಟಾಯಿಸಿ ಮೋಸ ಮಾಡಿರುವುದನ್ನು ಸಹಿಸಲಾಗುವುದಿಲ್ಲ. ಕೂಡಲೇ ಈತನಿಗೆ ಕಠಿಣ ಶಿಕ್ಷೆಯಾಗಬೇಕಾದ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ನಂಜುಂಡಸ್ವಾಮಿ ಸದಸ್ಯತ್ವವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು, ಆರೋಪಿ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಿ ಆತ ಸಾರ್ವಜನಿಕರಿಂದ ಪಡೆದಿರುವ ಸ್ವಯಂ ಘೋಷಿತ ತೆರಿಗೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಅಧ್ಯಕ್ಷ ಎನ್. ಸೋಮು ಮಾತನಾಡಿ, ಪೊಲೀಸ್ ಕಸ್ಟಡಿಯಲ್ಲಿರುವ ನಂಜುಂಡಸ್ವಾಮಿ ರಾಷ್ಟ್ರೀಕೃತ ಬ್ಯಾಂಕಿನಸೀಲನ್ನು ನಕಲಿ ಮಾಡಿ ಕಂದಾಯದ ರಶೀದಿಗೆ ನಕಲಿಮೊಹರನ್ನು ಹಾಕಿ ಸಾರ್ವಜನಿಕರು ಹಾಗೂ ಸರ್ಕಾರಕ್ಕೆ ವಂಚನೆ ಮಾಡಿರುವುದು ಅಕ್ಷಮ್ಯ, ಆರೋಪಿಯ ಇಂತಹನಡೆಯಿಂದ ಪುರಸಭೆಗೆ ಕೆಟ್ಟ ಹೆಸರು ಬಂದಿದೆ. ಜನರೆಲ್ಲಾ ಪುರಸಭೆಯನ್ನು ಹಾಗೂ ಸದಸ್ಯರನ್ನು ವಿಲನ್ ಗಳಂತೆ ನೋಡುತ್ತಿದ್ದಾರೆ. ಹಾಗಾಗಿ ಇಂತಹ ನೀಚ ಕೆಲಸಕ್ಕೆ ಕೈಹಾಕಿದ ಆರೋಪಿಯ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಪ್ರತಿಪಕ್ಷದ ಬಿಜೆಪಿ ಸದಸ್ಯ ಎಸ್.ಕೆ. ಕಿರಣ್ ಮಾತನಾಡಿ, ಕಂದಾಯ ವಂಚನೆ ಆರೋಪಿ ನಂಜುಂಡಸ್ವಾಮಿ ಮೇಲೆ ಹಿಂದೊಮ್ಮೆ ಲೋಕಾಯುಕ್ತ ದಾಳಿಯಾಗಿದೆ. ಈಗ ಬ್ಯಾಂಕಿನನಕಲಿ ಸೀಲ್ ಬಳಸಿದ ವಂಚನೆ ಆರೋಪವಿದೆ. ಈ ಬಗ್ಗೆ ಪುರಸಭೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಕೇವಲ ಪೊಲೀಸರಿಗೆ ದೂರು ಸಲ್ಲಿಸಿ ಕೂತರೇ ಆತ ಮತ್ತೆ ಜಾಮೀನುಪಡೆದು ಮತ್ತೆ ತನ್ನ ದಂಧೆ ಆರಂಭಿಸುತ್ತಾನೆ. ನಕಲಿ ಸೀಲ್ ಆರೋಪದಡಿ ಆರ್‌.ಬಿಐ ಅವರಿಗೆ ದೂರು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪುರಸಭೆಯಲ್ಲಿ ಕಂದಾಯ ಪಾವತಿ ಮಾಡಲು ಸ್ಕ್ಯಾನರ್ ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸದಸ್ಯ ಪ್ರಕಾಶ್ ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷೆ ವಸಂತ ಬಿ. ಶ್ರೀಕಂಠ ಮಾತನಾಡಿ, ಆರೋಪಿ ನಂಜುಂಡಸ್ವಾಮಿ ನಡೆ ಖಂಡನೀಯ, ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಹಾಗು ರಾಷ್ಟ್ರೀಕೃತ ಬ್ಯಾಂಕಿನಸೀಲ್ ನಕಲು ಮಾಡಿರುವುದು ಕಾನೂನು ಬಾಹೀರವಾಗಿದೆ. ಪುರಸಭೆ ಇಂತಹ ಚಟುವಟಿಕೆಗೆ ಅವಕಾಶ ನೀಡದು. ಕಾನೂನಿನ ಪ್ರಕಾರ ನಂಜುಂಡಸ್ವಾಮಿಗೆ ಶಿಕ್ಷೆಯಾಗಬೇಕೆಂಬುದು ಎಲ್ಲರ ಅಭಿಮತವಾಗಿದೆ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಂಜುಂಡಸ್ವಾಮಿ ಸದಸ್ಯತ್ವ ರದ್ದುಗೊಳಿಸುವಂತೆ ಮನವಿ ಮಾಡಲಾಗುತ್ತದೆ ಎಂದರು.ಉಪಾಧ್ಯಕ್ಷೆ ಎಂ. ರಾಜೇಶ್ವರಿ, ಸದಸ್ಯರಾದ ಎಲ್. ಮಂಜುನಾಥ್, ಸೈಯದ್ ಅಹಮದ್, ಮಂಜು, ರೂಪಾ ಪರಮೇಶ್, ನಾಗರಾಜು, ಹೇಮಂತ್, ತೇಜಸ್ವಿನಿ ರಾಜು, ನಾಮ ನಿರ್ದೇಶನಸದಸ್ಯರಾದ ಗುರುಸ್ವಾಮಿ, ಗಣೇಶ್, ನಾಗರತ್ನ, ಸಬೀಲ್ ಖಾನ್, ಚೇತನ್, ಜೋಗಿ ನಾಗರಾಜು, ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ಯೋಜನಾಧಿಕಾರಿ ಮಹದೇವಣ್ಣ, ಲೆಕ್ಕಾಧಿಕಾರಿ ವಿನಯ್, ಎಂಜಿನಿಯರ್ ಸಿದ್ದಯ್ಯ, ಜಯಲಕ್ಷ್ಮಿ ಇದ್ದರು.