ಸಾರಾಂಶ
ಕಾರ್ಖಾನೆ ನಿರ್ಮಾಣಕ್ಕೆ ಗವಿಶ್ರೀಗಳ ನೇತೃತ್ವದಲ್ಲಿ ಎಲ್ಲ ಧರ್ಮ ಗುರುಗಳು, ಸಂಘಟನೆಗಳು, ಜನ ವಿರೋಧಿಸಿರುವುದನ್ನು ಗಮನಿಸಿದ್ದೇನೆ. ಈಚೆಗೆ ಸಿಎಂ ಕೂಡ ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ನಾನು ಕೂಡ ಕೇಂದ್ರ ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವರೊಂದಿಗೆ ಮಾತನಾಡುವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಕೊಪ್ಪಳ:
ನಗರಕ್ಕೆ ಹೊಂದಿಕೊಂಡು ನಿರ್ಮಿಸುತ್ತಿರುವ ಬಿಎಸ್‌ಪಿಎಲ್ ಉಕ್ಕಿನ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹ ಬೆಂಬಲ ಸೂಚಿಸಿದ್ದಾರೆ. ಇದರ ವಿರುದ್ಧ ಕೇಂದ್ರಕ್ಕೆ ಪತ್ರ ಬರೆಯುವುದಾಗಿಯೂ ತಿಳಿಸಿದ್ದಾರೆ.ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಗುರುವಾರ ಬೆಂಗಳೂರಿನಲ್ಲಿ ದೇವೇಗೌಡ ಅವರ ಮನೆಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ಜನರ ಹಿತಕ್ಕಾಗಿ ನಾನು ಸಹ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಬಿಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ಈಗಾಗಲೇ ಜನರಿಂದ ವಿರೋಧ ವ್ಯಕ್ತವಾಗಿದೆ. ಈಚೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿದೆ. ಹೀಗಾಗಿ ನೀವು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಸಚಿವ ಭೂಪೇಂದ್ರ ಯಾದವ ಅವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಪರಿಸರ ಇಲಾಖೆಯ ಅನುಮತಿ ಕೊಡಿಸದಂತೆ ವೀರೇಶ ಮನವಿ ಮಾಡಿದ್ದಾರೆ.ಇದಕ್ಕೆ ಸ್ಪಂದಿಸಿದ ದೇವೇಗೌಡರು, ಕಾರ್ಖಾನೆ ನಿರ್ಮಾಣಕ್ಕೆ ಗವಿಶ್ರೀಗಳ ನೇತೃತ್ವದಲ್ಲಿ ಎಲ್ಲ ಧರ್ಮ ಗುರುಗಳು, ಸಂಘಟನೆಗಳು, ಜನ ವಿರೋಧಿಸಿರುವುದನ್ನು ಗಮನಿಸಿದ್ದೇನೆ. ಈಚೆಗೆ ಸಿಎಂ ಕೂಡ ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ನಾನು ಕೂಡ ಕೇಂದ್ರ ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವರೊಂದಿಗೆ ಮಾತನಾಡುವೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದ್ದು, ಕೊಪ್ಪಳ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಮಾಡಲು ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ.