ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಆಚರೆಣೆ

| Published : May 19 2025, 02:07 AM IST

ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಆಚರೆಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 93ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ನಗರದ ನೀರಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದರ್ಗಾದಲ್ಲಿ ಪ್ರಾರ್ಥನೆಯನ್ನು ಶಾಸಕರು ಹಾಗೂ ಪಕ್ಷದ ಮುಖಂಡರು ನೆರವೇರಿಸಿದರು.ದೇವೇಗೌಡರು ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ರೈತನ ಮಗ. ತುಂಬಿದ ಕೊಡದಂತೆ ಸರಳತೆಯ ಸಾಕಾರಮೂರ್ತಿ ಎನಿಸಿಕೊಂಡು, ಬದ್ಧತೆ, ಹಠ ಮತ್ತು ಛಲಗಾರಿಕೆಯಿಂದ ರಾಜಕೀಯ ಉತ್ತುಂಗಕ್ಕೇರಿದ ಮಹಾನಾಯಕರು ಎಂದು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 93ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ನಗರದ ನೀರಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದರ್ಗಾದಲ್ಲಿ ಪ್ರಾರ್ಥನೆಯನ್ನು ಶಾಸಕರು ಹಾಗೂ ಪಕ್ಷದ ಮುಖಂಡರು ನೆರವೇರಿಸಿದರು.

ಇದೇ ವೇಳೆ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಜಿಲ್ಲೆಯ ಹೆಮ್ಮೆಯ ವರಪುತ್ರ, ರೈತಪರವಾಗಿ ಸದಾ ಚಿಂತಿಸುವ ತಾಯಿ ಹೃದಯಿ, ರಾಜ್ಯ ರಾಜಕೀಯದ ಗುರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರ್ನಾಟಕ ಹಾಗೂ ದೇಶಕಂಡ ರಾಜಕಾರಣಿಗಳಲ್ಲೆಲ್ಲಾ ವಿಶಿಷ್ಟ ವ್ಯಕ್ತಿತ್ವ ಮತ್ತು ಘನತೆಯುಳ್ಳ ರಾಜಕಾರಣಿ ಎಂದರು.ದೇವೇಗೌಡರು ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ರೈತನ ಮಗ. ತುಂಬಿದ ಕೊಡದಂತೆ ಸರಳತೆಯ ಸಾಕಾರಮೂರ್ತಿ ಎನಿಸಿಕೊಂಡು, ಬದ್ಧತೆ, ಹಠ ಮತ್ತು ಛಲಗಾರಿಕೆಯಿಂದ ರಾಜಕೀಯ ಉತ್ತುಂಗಕ್ಕೇರಿದ ಮಹಾನಾಯಕರು ಎಂದು ಬಣ್ಣಿಸಿದರು. ರೈತ ಕುಟುಂಬದ ಕೂಸಾಗಿ, ಹಳ್ಳಿಯ ಹೊಲಗದ್ದೆಗಳಲ್ಲಿ ಕೆಲಸ ಮಾಡಿ, ಭೂಮಿ ತಾಯಿಯ ಬಂಧುವಾಗಿ ಬೆಳೆದ ಗೌಡರು 1960ರ ದಶಕದಲ್ಲಿಯೇ ಹೊಳೆನರಸೀಪುರದಲ್ಲಿ ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಜನಪ್ರತಿನಿಧಿಯಾದವರು ಎಂದು ಹೇಳಿದರು. 1962ರಲ್ಲಿ ರಾಜ್ಯ ರಾಜಕಾರಣಕ್ಕೆ ಅವರ ಪ್ರವೇಶ ಒಂದು ರೀತಿಯ ಮಿಂಚಿನ ಸಂಚಾರ. ವಿಧಾನಸಭೆಯ ಸದಸ್ಯರಾಗಿ ಅಂದಿನಿಂದ ಇಲ್ಲಿಯವರೆವಿಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಗಂಭೀರ ಅಧ್ಯಯನ, ಮಾತುಗಾರಿಕೆ ಮೂಲಕ ಅವರು ತಮ್ಮದೇ ಹೆಜ್ಜೆಗುರುತು ಮೂಡಿಸುತ್ತಾ ರಾಜ್ಯ, ದೇಶದ ಎಲ್ಲ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಬರೋಬ್ಬರಿ 60 ವರ್ಷಗಳ ಅವರ ಒಟ್ಟಾರೆ ರಾಜಕೀಯ ಜೀವನ, ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅವರು ಸಲ್ಲಿಸಿರುವ ಸೇವೆ ಅಜರಾಮರ. ಶಾಸಕಾಂಗದ ಬದುಕಿನಲ್ಲಿ ದೇವೇಗೌಡರಿಗೆ ಅಧಿಕಾರ ಸಿಕ್ಕಿದ್ದು ತುಂಬಾ ಕಡಿಮೆ, ಸುಮಾರು 4 ವರ್ಷಗಳ ಕಾಲ ಮಂತ್ರಿಯಾಗಿ, ಒಂದೂವರೆ ವರ್ಷ ಮುಖ್ಯಮಂತ್ರಿ ಯಾಗಿ ಮತ್ತು 10 ತಿಂಗಳು ದೇಶದ ಪ್ರಧಾನಿಯಾಗಿ ಅವರು ಅಧಿಕಾರ ಅನುಭವಿಸಿದ ಒಟ್ಟು ಅವಧಿ ಸುಮಾರು 6 ವರ್ಷ 4 ತಿಂಗಳು. ಆರು ದಶಕ ಮೀರಿದ ಸುದೀರ್ಘ ಹಾಗೂ ನಿರಂತರ ರಾಜಕೀಯ ಬದುಕಿನಲ್ಲಿ 6 ವರ್ಷ 4 ತಿಂಗಳು ಅಧಿಕಾರ ನಡೆಸಿದ್ದು ಬಿಟ್ಟರೆ ಜೀವನದುದ್ದಕ್ಕೂ ಹೋರಾಟದ ರಾಜಕೀಯ ಮಾಡಿದವರು ಎಂದು ನೆನಪಿಸಿಕೊಂಡರು.

ಈಗಲೂ ಹೋರಾಟದ ಬದುಕನ್ನೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅದೂ ಕೂಡ ಪ್ರವಾಹಕ್ಕೆ ವಿರುದ್ಧವಾಗಿಯೇ ಸಾಗುವ ಹೋರಾಟದ ಬದುಕು ಹೆಮ್ಮೆಯ ಗೌಡರದ್ದಾಗಿದೆ. ಹಳ್ಳಿಯ ಯುವಕನೊಬ್ಬ 29ನೇ ವಯಸ್ಸಿಗೆ ಶಾಸಕನಾಗಿ, ನಂತರ ವಿರೋಧ ಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಸಂಸದನಾಗಿ, ಮುಖ್ಯಮಂತ್ರಿಯಾಗಿ, ರಾಷ್ಟ್ರದ ಪ್ರಧಾನಿಯಾಗಿ, ಈಗ 92ರ ಇಳಿವಯಸ್ಸಿನಲ್ಲಿಯೂ ಜನರ ಮಧ್ಯೆ ನಿಂತು ಜನರ ಹೋರಾಟಗಾರ ಮಾಡುತಿದ್ದಾರೆ ಎಂದು ಗುಣಗಾನ ಮಾಡಿದರು.

ನರ್ಮದೆಯನ್ನು ದಾಟಿ ಹರ್ಷ ಮಹಾರಾಜನನ್ನು ಸೋಲಿಸಿದ ಕನ್ನಡಿಗರ ದೊರೆ ಇಮ್ಮಡಿ ಪುಲಿಕೇಶಿಯ ನಂತರ ದಕ್ಷಿಣ ಭಾರತದ ಗಡಿಯನ್ನು ದಾಟಿ ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗ ಪ್ರಧಾನಿ ದೇವೇಗೌಡರು ಎಂಬುದು ಐತಿಹಾಸಿಕವಾಗಿ ಮತ್ತು ಭಾವನಾತ್ಮಕವಾಗಿ ಕನ್ನಡಿಗರಿಗೆ ಹೆಮ್ಮೆ ತರುವ ಸಂಗತಿ ಎಂದರು. ದೇವೇಗೌಡರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಅವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಅಪಾರ ಎಂದರು. ನಂತರ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ , ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘುಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಬೈಲಹಳ್ಳಿ ಸತ್ಯನಾರಾಯಣ, ಮಾಜಿ ಉಪಾಧ್ಯಕ್ಷ ದುದ್ದ ಲಕ್ಷ್ಮಣಗೌಡ, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಅನಿಲ ಕುಮಾರ್‌, ಶಂಕರ್, ಜೆಡಿಎಸ್ ವಕ್ತಾರ ಹೊಂಗೆರೆ ರಘು, ನಗರಸಭೆ ಸದಸ್ಯರಾದ ವಾಸುದೇವ್, ಚಂದ್ರೇಗೌಡ, ಮುಖಂಡರಾದ ಶಿವಣ್ಣ, ರಾಮಕೃಷ್ಣೇಗೌಡ, ಗೋಪಾಲ್, ಸಮೀರ್‌, ಬಾಲಕೃಷ್ಣ ಹಾಗೂ ನೂರಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.