ಸಾರಾಂಶ
ಕಲ್ಪತರು ನಾಡಿನ ಸುಪ್ರಸಿದ್ಧ ಶ್ರೀಮಠಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶನಿವಾರ ಮಧ್ಯಾಹ್ನ ಭೇಟಿ ನೀಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಗಳವರಿಂದ ಆಶೀರ್ವಾದ ಪಡೆದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ನಾಡಿನ ಸುಪ್ರಸಿದ್ಧ ಶ್ರೀಮಠಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶನಿವಾರ ಮಧ್ಯಾಹ್ನ ಭೇಟಿ ನೀಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಗಳವರಿಂದ ಆಶೀರ್ವಾದ ಪಡೆದರು. ಕೆರೆಗೋಡಿ-ರಂಗಾಪುರ ಶ್ರೀಮಠಕ್ಕೂ ದೇವೇಗೌಡರ ಕುಟುಂಬಕ್ಕೂ ಒಂದು ರೀತಿಯ ಅವಿನಾಭಾವ ಸಂಬಂದವಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಸಹ ಮಠದ ಪರಮ ಭಕ್ತರಾಗಿದ್ದು ಭೇಟಿ ನೀಡುತ್ತಿರುತ್ತಾರೆ. ಶನಿವಾರ ದೇವೇಗೌಡರು ಶ್ರೀ ಮಠಕ್ಕೆ ಬರುವ ಯಾವುದೇ ಪೂರ್ವನಿಗದಿತ ಕಾರ್ಯಕ್ರಮವಾಗಿರಲಿಲ್ಲ. ದೇವೇಗೌಡರು ಬಂದ ನಂತರ ಶ್ರೀಗಳು ಭಿಕ್ಷಾಟನೆಗೆಂದು ಕ್ಷೇತ್ರದಿಂದ ಹೊರಗಡೆ ಹೋಗಿದ್ದರು. ಗೌಡರು ಆಗಮಿಸಿರುವ ವಿಷಯ ತಿಳಿದ ಶ್ರೀಗಳು ತಕ್ಷಣವೇ ಆಗಮಿಸಿ ಗೌಡರನ್ನು ಸ್ವಾಗತಿಸಿ, ಸನ್ಮಾನಿಸಿ ಆಶಿರ್ವದಿಸಿದರು. ಪ್ರಧಾನಿಯಾಗಲೆಂದು ಆಶೀರ್ವಾದ :ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆ ಒಮ್ಮೆ ಶ್ರೀಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಶ್ರೀಮಠದ ೬ನೇ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಯವರಲ್ಲಿ ಉನ್ನತ ಸ್ಥಾನಮಾನ ಗಳಿಸುವ ಸಲುವಾಗಿ ಆಶೀರ್ವಾದ ಕೇಳಿದ ಸಂದರ್ಭದಲ್ಲಿ, ಪವಾಡ ಪುರುಷರೂ ಹಾಗೂ ಕಠಿಣ ತಪಸ್ವಿಗಳಾಗಿದ್ದ ೬ನೇ ಶ್ರೀಗಳು ನೀವು ಪ್ರಧಾನಿಯಂತ ಉನ್ನತ ಹುದ್ದೇಗೇರುತ್ತೀರೆಂದು ಆಶೀರ್ವದಿಸಿದ್ದರು. ಇದಾದ ನಂತರ ದೇವೇಗೌಡರು ಮುಖ್ಯಮಂತ್ರಿ ಯಾಗಿ, ನಂತರ ಪ್ರಧಾನಿ ಹುದ್ದೆಗೂ ಏರಿದ್ದರು. ಹಾಗೆ ಉಳಿದ ಕುಮಾರಸ್ವಾಮಿಯವರ ವಚನ
ಎಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀ ಮಠದ ಒಂದು ಧಾರ್ಮಿಕ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ಸಮಯದಲ್ಲಿ ತಿಪಟೂರಿನಲ್ಲಿ ಬಿ. ನಂಜಾಮರಿಯವರು ಶಾಸಕರಾಗಿದ್ದರು. ಅಂದಿನ ಧಾರ್ಮಿಕ ಸಮಾರಂಭದಲ್ಲಿ ಶ್ರೀಮಠದ ಭಕ್ತರು, ಹಿರಿಯ ವಿದ್ಯಾರ್ಥಿ ಸಂಘದವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮಠಕ್ಕೆ ಒಂದು ಗುರುಭವನ ನಿರ್ಮಿಸಿಕೊಡಬೇಕೆಂದು ಕೇಳಿಕೊಂಡಿದ್ದರು.ನಂತರ ಕುಮಾರಸ್ವಾಮಿಯವರು ಪವಿತ್ರ ಹಾಗೂ ಪವಾಡ ಶಕ್ತಿಯಿರುವ ಶ್ರೀ ಮಠಕ್ಕೆ ನನ್ನ ತಂದೆ ದೇವೇಗೌಡರು ಹಾಗೂ ತಾಯಿ ಚನ್ನಮ್ಮನವರ ಹೆಸರಿನಲ್ಲಿ ಸ್ವಂತ ಹಣದಿಂದ ಭವನ ಕಟ್ಟಿಸಿಕೊಡುವುದಾಗಿ ಶ್ರೀಮಠದ ಭಕ್ತರು ಹಾಗೂ ಹಲವಾರು ಸ್ವಾಮೀಜಿಯವರು, ಗಣ್ಯರು ಭಾಗವಹಿಸಿದ್ದ ದೊಡ್ಡ ಸಮಾರಂಭದಲ್ಲಿ ವಾಗ್ದಾನವನ್ನು ಮಾಡಿದ್ದರು.